ಉಡುಪಿ | ನ.28: ಪ್ರಧಾನಿ ಸಂಚರಿಸುವ ಮಾರ್ಗದ ಇಕ್ಕೆಲಗಳ ಅಂಗಡಿ ಮುಂಗಟ್ಟು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಉಡುಪಿ, ನ.26: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ ನಿಯಮಾನುಸಾರ ಅನುಸರಿಸಬೇಕಾದ ಶಿಷ್ಟಾಚಾರದಂತೆ, ಪ್ರದಾನಿಯವರು ಸಂಚರಿಸುವ ಮಾರ್ಗದ ಎರಡು ಇಕ್ಕೆಲಗಳಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ನ.28ರ ಬೆಳಗ್ಗೆ 9:00ರಿಂದ ಅಪರಾಹ್ನ 3:00ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಇದರಂತೆ ಹೆಲಿಪ್ಯಾಡ್ ವಠಾರ, ಶ್ರೀಕೃಷ್ಣ ಮಠ ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತಲ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಭದ್ರತೆಯ ದೃಷ್ಠಿಯಿಂದ ನ.26ರಿಂದ 28ರ ಸಂಜೆ 6:00 ಗಂಟೆಯವರೆಗೆ ಉಡುಪಿ ನಗರದ 5ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಫ್ಲೈಯಿಂಗ್ ರೆನ್’ ಎಂದು ಆದೇಶ ಹೊರಡಿಸಲಾಗಿದೆ.
ನೀರಿನ ಬಾಟಲ್ ನಿಷೇಧ :
ಪ್ರದಾನಿ ಮೋದಿ ಅವರ ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಯಾವುದೇ ರೀತಿಯ ಬ್ಯಾಗ್, ನೀರಿನ ಬಾಟಲಿ, ಧ್ವಜ, ಸ್ಟಿಕ್ಕರ್ಸ್, ಬಲೂನ್, ಪಟಾಕಿ ಮತ್ತು ಲೂಸ್ ಪಾಲಿಥಿನ್ ಗಳನ್ನು ತರುವುದನ್ನು ಸಹ ನಿಷೇಧಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತ(ಬಿಎನ್ಎಸ್ಎಸ್) 2023 ಸೆಕ್ಷನ್ 163ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.







