ಉಡುಪಿ | ನ.28 : ಬನ್ನಂಜೆಯಿಂದ ಕಲ್ಸಂಕವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’

ಉಡುಪಿ, ನ.25 : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಬೃಹತ್ ಗೀತೋತ್ಸವದ ಹಿನ್ನೆಲೆಯಲ್ಲಿ ಜರುಗಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಬನ್ನಂಜೆಯಿಂದ ಕಲ್ಸಂಕದವರೆಗೆ ‘ರೋಡ್ ಶೋ’ದಲ್ಲಿ ಭಾಗವಹಿಸುವರು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.28ರ ಶುಕ್ರವಾರ ಬೆಳಗ್ಗೆ 11:40ಕ್ಕೆ ಆದಿಉಡುಪಿ ಹೆಲಿಪ್ಯಾಡ್ಗೆ ಆಗಮಿಸುವ ಮೋದಿ ಅವರ ರೋಡ್ ಶೋ ಬನ್ನಂಜೆಯ ಡಾ.ವಿ.ಎಸ್.ಆಚಾರ್ಯ ಬಸ್ನಿಲ್ದಾಣದ ಬಳಿ ಇರುವ ನಾರಾಯಣಗುರು ಸರ್ಕಲ್ ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ಜಂಕ್ಷನ್ವರೆಗೆ ಸಾಗಲಿದೆ ಎಂದು ಅವರು ತಿಳಿಸಿದರು.
ರೋಡ್ ಶೋನಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಬಾಗವಹಿಸಲಿದ್ದಾರೆ ಎಂದು ತಿಳಿಸಿದ ಕುತ್ಯಾರು, ಪ್ರಧಾನಿ ಮೋದಿ ಅಪರಾಹ್ನ 12:00ಗಂಟೆಗೆ ಶ್ರೀಕೃಷ್ಣ ಮಠದ ತಲುಪಲಿದ್ದು, ಶ್ರೀಕೃಷ್ಣ ದರ್ಶನದ ಬಳಿಕ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಪರಾಹ್ನ 1:35ಕ್ಕೆ ಸಮಾರಂಭದ ಸ್ಥಳದಿಂದ ಹೊರಟು 1.40ಕ್ಕೆ ಆದಿಉಡುಪಿ ಹೆಲಿಪ್ಯಾಡ್ ತಲುಪಿ 1:45ಕ್ಕೆ ಉಡುಪಿಯಿಂದ ಹೆಲಿಕಾಫ್ಟರ್ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿಂದ 2:15ಕ್ಕೆ ಗೋವಾಕ್ಕೆ ಪ್ರಯಾಣಿಸಲಿದ್ದಾರೆ ಎಂದರು.
ಲಕ್ಷ ಕಂಠ ಗೀತಾ ಪಾರಾಯಣ ಮತ್ತು ರೋಡ್ ಶೋ ನಡುವೆ ಯಾವುದೇ ಗೊಂದಲವಿಲ್ಲ. ಲಕ್ಷಕಂಠ ಗೀತಾ ಪಾರಾಯಣದಲ್ಲೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದ ನವೀನ್ ಶೆಟ್ಟಿ, ರೋಡ್ ಶೋನಲ್ಲಿ ಜಿಲ್ಲೆಯ 1112 ಬೂತ್ ಗಳ ಕಾರ್ಯಕರ್ತರು, ನಾಯಕರು ಭಾಗವಹಿಸಲಿದ್ದಾರೆ ಎಂದರು.
ಬನ್ನಂಜೆಯಿಂದ ಕಲ್ಸಂಕದವರೆಗೂ ರೋಡ್ ಶೋ ಇರಲಿದೆ. ಇದಕ್ಕಾಗಿಯೇ ರಸ್ತೆಯ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಬನ್ನಂಜೆಯ ಜಯಲಕ್ಷ್ಮೀ ಶೋರೂಮ್ ಎದುರು ಹಾಗೂ ಸಿಟಿ ಬಸ್ ನಿಲ್ದಾಣದ ಬಳಿ ವೇದಿಕೆಯನ್ನು ನಿರ್ಮಿಸಿ ಅಲ್ಲಿ ಯಕ್ಷಗಾನ, ಹುಲಿವೇಷ ಹಾಗೂ ಕೃಷ್ಣ ವೇಷಧಾರಿಗಳ ಪ್ರದರ್ಶನ ಮೂಲಕ ಪ್ರಧಾನಿಯನ್ನು ಸ್ವಾಗತಿಸಲಾಗುತ್ತದೆ. ವೇದಿಕೆಯ ಮೇಲೆ ಯಕ್ಷಗಾನ, ಹುಲಿವೇಷ ಹಾಗೂ ಕೃಷ್ಣ ವೇಷಧಾರಿಗಳು ಇರುತ್ತಾರೆ ಎಂದರು.
ಬನ್ನಂಜೆಯಿಂದ ಕಲ್ಸಂಕದವರೆಗೂ ಸುಮಾರು 15 ನಿಮಿಷ ರೋಡ್ ಶೋ ಇರಲಿದೆ. ತೆರೆದ ವಾಹನದಲ್ಲಿ ಮೋದಿಯವರು ಇರುವುದಿಲ್ಲ. ತಮ್ಮ ವಾಹನದ ಒಳಗೆ ಅಥವಾ ಸ್ವಲ್ಪ ದೂರ ನಡೆದುಕೊಂಡು ಬರಬಹುದು. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಏನಿದ್ದರೂ ಮೋದಿ ಸ್ವಾಗತಕ್ಕೆ ಎಲ್ಲ ಸಿದ್ಧತೆಗಳು ಪಕ್ಷದ ವತಿಯಿಂದ ನಡೆಯುತ್ತಿದೆ ಎಂದರು.







