ಉಡುಪಿ : ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎನ್ನೆಸ್ಸೆಸ್ ಶಿಬಿರಕ್ಕೆ ಚಾಲನೆ

ಉಡುಪಿ, ಮೇ 9: ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ವತಿಯಿಂದ 2025-26ನೇ ಸಾಲಿನ ವಿಶೇಷ ಶಿಬಿರವು ಬ್ರಹ್ಮಾವರ ತಾಲೂಕಿನ ಗೋಳಿಯಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೆಳ್ವೆಯ ಉದ್ಯಮಿ ರಾಜೇಂದ್ರ ಕಿಣಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರಗಳು ಯುವಕರಲ್ಲಿ ನಾಯಕತ್ವ, ಶಿಸ್ತು, ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಸುರೇಖಾ ಕೆ. ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಅರಿವು ಪಡೆದು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಗೋಳಿಯಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮುಂಜುನಾಥ್ ಪಟಗಾರ ಹಾಗೂ ಜಯರಾಮ ಶೆಟ್ಟಿ ಮಾತನಾಡಿದರು. ಉಪ ಪ್ರಾಂಶುಪಾಲೆ ಡಾ.ಪ್ರೀತಿ ಹರೀಶ್ ರಾಜ್, ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಜಯಮೋಲ್ ಪಿ.ಎಸ್., ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಅಮೋಘ ಗಾಡ್ಕರ್, ಎನ್‌ಎಸ್‌ಎಸ್ ಘಟಕದ ಕಾರ್ಯದರ್ಶಿ ಸಂದೇಶ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಅಧಿಕಾರಿ ಡಾ.ನವೀನ್ ಚಂದ್ರ ಸಿಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯದರ್ಶಿ ಸಮೀರ್ ಸ್ವಾಗತಿಸಿದರು. ಅಂಕಿತಾ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಅವಧಿಯಲ್ಲಿ ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ಜಾಗೃತಿ, ಬೀದಿ ನಾಟಕ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.






