ಉಡುಪಿ | ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಅಂಬೇಡ್ಕರ್ ನಾಟಕ ಪ್ರದರ್ಶನಕ್ಕೆ ಆಕ್ಷೇಪ

ಜಯನ್ ಮಲ್ಪೆ
ಉಡುಪಿ, ಡಿ.9: ಸಾವರ್ಕರ್ ದೇಶ ಪ್ರೇಮಿಗಳ ಬಳಗದವರು ಗಂಗೊಳ್ಳಿಯಲ್ಲಿ ಡಿ.23ರಂದು ನಡೆಸಲು ಉದ್ದೇಶಿಸಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ಎಂಬ ನಾಟಕ ಪ್ರದರ್ಶನಕ್ಕೆ ದಲಿತ ಮುಖಂಡ ಜಯನ್ ಮಲ್ಪೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಂಗೊಳ್ಳಿ ತೀರ ಸೂಕ್ಮ ಪ್ರದೇಶ ಎಂಬುದು ತಮಗೆ ಈಗಾಗಲೇ ತಿಳಿದಿದೆ. ಈ ನಾಟಕದಲ್ಲಿ ಅಂಬೇಡ್ಕರ್ ಅವರನ್ನು ಅನಗತ್ಯವಾಗಿ ಹಿಂದೂ ಧರ್ಮದ ವಕ್ತಾರನಂತೆ ಮತ್ತು ಮುಸ್ಲಿಂ ವಿರೋಧಿ ಎಂಬಂತೆ ಹಾಗೂ ಅಸ್ಪಶ್ಯತೆಯ ಬಗ್ಗೆ ಇಲ್ಲ ಸಲ್ಲದ ಕಾಲ್ಪನಿಕ ಕಥೆಕಟ್ಟಿ ಪ್ರದರ್ಶನ ಮಾಡುವ ಅಪಾಯವಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾಡಳಿತ ಜೊತೆಗೆ ಜಿಲ್ಲೆಯ ಎಲ್ಲಾ ದಲಿತ ನಾಯಕರಿಗೆ ಈ ನಾಟಕದ ವಿಡಿಯೋ ಪ್ರದರ್ಶನ ತೋರಿಸಿ ಎಲ್ಲರ ಒಪ್ಪಿಗೆ ಪಡೆದು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಒಂದು ವೇಳೆ ಈ ನಾಟಕಕ್ಕೆ ಅನುಮತಿ ನೀಡಿದಲ್ಲಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಬಹುದು. ಆದುದರಿಂದ ಈ ನಾಟಕಕ್ಕೆ ಅನುಮತಿ ನೀಡುವ ಮುನ್ನ ವಿಡಿಯೋವನ್ನು ಗಮನಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





