ಉಡುಪಿ: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಮೃತ್ಯು

ಉಡುಪಿ: ತಾಯಿಯ ಕೈಯಿಂದ ಅಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದ ಒಂದು ವರ್ಷ ಎರಡು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಡುಪಿ ಕಿನ್ನಿಮೂಲ್ಕಿಯ ವೀರಭದ್ರ ದೇವಸ್ಥಾನದ ಬಳಿಯ ಮನೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ 11:30ರ ಸುಮಾರಿಗೆ ಗಂಡ ಕೆಲಸಕ್ಕೆ ಹಾಗೂ ಅತ್ತೆ ಹೊರಗೆ ಹೋಗಿದ್ದು, ತಾಯಿ ನಯನಾ ಕರ್ಕಡ ಮತ್ತು ಮಗು ಕೀರ್ತನಾ ಕರ್ಕಡ ಅವರು ಮಾತ್ರ ಇದ್ದಾಗ ಘಟನೆ ನಡೆದಿದೆ. ಮಗುವಿಗೆ ಸ್ನಾನ ಮಾಡಿಸಲೆಂದು ಕೀರ್ತನಾ ಕರ್ಕಡಳನ್ನು ಬಾವಿಯ ದಂಡೆಯ ಮೇಲೆ ಕೂರಿಸಿದ್ದರು. ಆಗ ಅಲ್ಲಿದ್ದ ನಾಯಿಯೊಂದು ಜೋರಾಗಿ ಬೊಳಗಿದಾಗ ಗಾಬರಿ ಬಿದ್ದ ಮಗು ಕೊಸರಾಡಿದ್ದು ತಾಯಿಯ ಹಿಡಿತ ತಪ್ಪಿ ನೇರವಾಗಿ ಬಾವಿಗೆ ಬಿದ್ದಿತ್ತು.
ತಕ್ಷಣ ನಯನಾ ಅವರೂ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ಎತ್ತಿ ಹಿಡಿದ್ದರು. ಆಕೆ ಬೊಬ್ಬೆ ಹೊಡೆಯುತಿದ್ದರೂ ಯಾರೂ ಕೇಳುವರು ಇದ್ದಿರಲಿಲ್ಲ. ಅತ್ತೆ ಬಂದ ಬಳಿಕ ತಾಯಿ-ಮಗುವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಒಯ್ದಾಗ ತಡವಾಗಿದ್ದು ಮೆದುಳಿಗೆ ನೀರು ಹೋಗಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





