Udupi: ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಪ್ರಚೋದನಕಾರಿ ಪೋಸ್ಟ್; ಓರ್ವ ಆರೋಪಿ ಬಂಧನ

ಕಾರ್ಕಳ, ಜ.6: ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹಗಳನ್ನು ಬೆರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ(37) ಬಂಧಿತ ಆರೋಪಿ. ಈತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೊಂದು ಪ್ರಕರಣದ ಆರೋಪಿ ನಿಟ್ಟೆಯ ಸುದೀಪ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸುದೀಪ್ ಶೆಟ್ಟಿ ಹಾಗೂ ಸುಧಾಕರ್, ಜ.3ರಂದು ತಮ್ಮ ಫೇಸ್‌ಬುಕ್ ಖಾತೆಗಳಲ್ಲಿ ‘ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ ದಫ್‌ನಂತಹ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿದ ಕೂಡl ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ’ ಎಂದು ಫೋಸ್ಟ್ ಹಾಕಿದ್ದರು.
ಈ ಮೂಲಕ ಸುದೀಪ್ ಶೆಟ್ಟಿ ಹಾಗೂ ಸುಧಾಕರ್ ಜಾತಿ, ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಪೋಸ್ಟ್ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.







