ಉಡುಪಿ: ಆರೆಂಜ್ ಅಲರ್ಟ್ ಮುಂದುವರಿಕೆ; 21 ಮನೆಗಳಿಗೆ ಹಾನಿ
11 ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು

ಉಡುಪಿ, ಜು.26: ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಆರೆಂಜ್ ಅಲರ್ಟ್‌ನ ಎಚ್ಚರಿಕೆ ಮುಂದುವರಿದಿದೆ. ದಕ್ಷಿಣ ಕನ್ನಡ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಜು.28ರವರೆಗೆ ಕಡಲು ಪ್ರಕ್ಷುಬ್ದವಾಗಿದ್ದು, 3.5ರಿಂದ 4ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾದ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಆಗಾಗ ವೇಗದ ಗಾಳಿಯೊಂದಿಗೆ ಬಿರುಸಿನ ಮಳೆ ಬೀಳುವ ಸಾಧ್ಯತೆ ಇದ್ದು, ಅರಬಿಸಮುದ್ರ ಪ್ರಕ್ಷುಬ್ಧವಾಗಿ ರುವುದರಿಂದ ಯಾರೂ ಸಮುದ್ರದ ದಡದಲ್ಲಿ ತಿರುಗ ದಂತೆ, ಮೀನುಗಾರರು ಉದ್ಯೋಗಕ್ಕಾಗಿ ಕಡಲಿಗೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ರಾಜ್ಯದ ಬಂದರು ಪ್ರದೇಶಗಳಲ್ಲಿ ಎಚ್ಚರಿಕೆಯ ಸ್ಥಳೀಯ ನಂ.3 ಸೂಚನೆಗಳನ್ನು ಹಾಕಲು ಸೂಚಿಸಲಾಗಿದೆ.
ಕಳೆದ ಕೆಲವು ದಿನಗಳ ಸತತ ಗಾಳಿ-ಮಳೆಯಿಂದ ಜಿಲ್ಲೆಯಲ್ಲಿ 18 ಮನೆಗಳಿಗೆ ಹಾಗೂ ಮೂರು ಜಾನು ವಾರು ಕೊಟ್ಟಿಗೆಗಳಿಗೆ ಹಾನಿಯಾದ ಮಾಹಿತಿ ಜಿಲ್ಲಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದು, ಇದರಿಂದ 11ರಿಂದ 12 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಈ ಬಾರಿ ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಮನೆಗಳಿಗೆ (14) ಹಾನಿ ಯಾಗಿರುವುದಾಗಿ ತಿಳಿದುಬಂದಿದೆ.
ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಗಿರಿಜಾ ಅವರ ಮನೆ ಮಳೆಯಿಂದ ಸಂಪೂರ್ಣ ಹಾನಿಗೊಳ ಗಾಗಿದೆ. 2.50 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಕೋಣಿ ಗ್ರಾಮದ ಶಾರದಾ ಅವರ ಮನೆಗೆ 1.30 ಲಕ್ಷ ರೂ., ಆನಗಳ್ಳಿಯ ಕೆ.ಶಂಕರನಾರಾಯಣ ಹೆಬ್ಬಾರ್ ಮನೆಗೆ ಒಂದು ಲಕ್ಷರೂ.ಗಳಷ್ಟು ನಷ್ಟವಾಗಿದೆ.
ಇನ್ನುಳಿದಂತೆ ಆನಗಳ್ಳಿಯ ಕೇಶವ ಭಟ್ ಮನೆಗೆ 50ಸಾವಿರ, ವಡೇರಹೋಬಳಿಯ ನರಸಿಂಹ ಮನೆಗೆ 30ಸಾವಿರ, ನವೀನ್ ಮನೆಗೆ 15 ಸಾವಿರ, ತಲ್ಲೂರಿನ ಮಂಜಿ ದೇವಾಡಿಗರ ಮನೆಗೆ 20 ಸಾವಿರ, ಬಸ್ರೂರಿನ ರಾಮ ಆಚಾರಿ ಮನೆಗೆ 80 ಸಾವಿರ, ಬಳ್ಕೂರಿನ ಹೆರಿಯ ಪೂಜಾರಿ ಮನೆಗೆ 50ಸಾವಿರ, ಕಟ್ಟಾಡಿಯ ಗೋವಿಂದ ಕುಲಾಲ್, ಕುಷ್ಠ ಕುಲಾಲ್‌ರ ಮನೆಗೆ ತಲಾ 20ಸಾವಿರ, ಗುಜ್ಜಾಡಿಯ ನಾಗಮ್ಮ ಎಂಬವರ ಮನೆಗೆ ಮೇಲೆ ಮರ ಬಿದ್ದು 35ಸಾವಿರ ಹಾಗೂ ಯಡಾಡಿ ಮತ್ಯಾಡಿಯ ಐತ ಕೊರಗ ಮನೆ ಮೇಲೆ ಮರ ಬಿದ್ದು 50 ಸಾವಿದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕು ಬೆಳ್ಳೆ ಗ್ರಾಮದ ರವಿರಾಜ್ ಆಚಾರ್ಯರ ಮನೆಗೆ 80 ಸಾವಿರ ಹಾಗೂ ಎಲ್ಲೂರು ಗ್ರಾಮದ ಚಕ್ರಪಾಣಿ ಉಡುಪರ ಮನೆಗೆ 70 ಸಾವಿರ ರೂ.ಗಳಷ್ಟು ನಷ್ಟವಾಗಿದೆ.
ಕುಂದಾಪುರ ತಾಲೂಕು ಗುಲ್ವಾಡಿಯ ಸೀತಾ, ಬೇಳೂರಿನ ಚಂದು ಹಾಗೂ ಕಾರ್ಕಳ ತಾಲೂಕು ನಿಟ್ಟೆಯ ಪ್ರವೀಣ್ ಆಚಾರ್ ಮನೆಯ ಜಾನುವಾರು ಕೊಟ್ಟಿಗೆಗಳು ಗಾಳಿ-ಮಳೆಗಳಿಗೆ ಬಾಗಶ: ಕುಸಿದು 80 ಸಾವಿರದಷ್ಟು ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.







