ಉಡುಪಿ ಪೊಲೀಸ್ ಇಲಾಖೆಯ ‘ದೃಷ್ಟಿ’ ಹೈಟೆಕ್ ಕಂಟ್ರೋಲ್ ಸೆಂಟರ್ ಮುಂದಿನ ತಿಂಗಳು ಕಾರ್ಯಾರಂಭ; ಅಹಿತಕರ ಘಟನೆಗಳ ಬಗ್ಗೆ ನಿಗಾ

ಉಡುಪಿ, ನ.24: ರಸ್ತೆ ಅಪಘಾತ, ಸಂಚಾರ ನಿಯಮ ಉಲ್ಲಂಘನೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಹಿತಕರ ಘಟನೆಗಳ ಮೇಲೆ ನಿರಂತರ ನಿಗಾ ಇರಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಡಿ.ಪಿ.ಐ.ಎಫ್.ಎಸ್. ಸಲ್ಯೂಷನ್ಸ್ ಸಹಭಾಗಿತ್ವದಲ್ಲಿ ನೂತನ ಸುಸಜ್ಜಿತ ’ದೃಷ್ಟಿ ಇಂಟಿಗ್ರೇಟೆಡ್ ಸಿಸಿಟಿವಿ ಅಂಡ್ ಕಮಾಂಡ್ ಕಂಟ್ರೋಲ್ ಸೆಂಟರ್’ ಸ್ಥಾಪಿಸಿದ್ದು, ಉಡುಪಿ ಎಸ್ಪಿ ಕಚೇರಿಯಲ್ಲಿರುವ ಈ ಕೇಂದ್ರ ಮುಂದಿನ ತಿಂಗಳು ಕಾರ್ಯಾರಂಭಗೊಳ್ಳಲಿದೆ.
ಜಿಲ್ಲೆಯಾದ್ಯಂತ ಈಗಾಗಲೇ ಸುಮಾರು 200 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮುಂದಿನ ಹಂತ ದಲ್ಲಿ ಹೆಚ್ಚುವರಿಯಾಗಿ 200 ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಲಾಗಿದೆ. ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಂಚಾರ ನಿಯಮ ಉಲ್ಲಂಘನೆ ಗಳಿಗೆ ಸಂಬಂಧಿಸಿದ ದಂಡದ ನೋಟಿಸ್ ಗಳನ್ನು ಇದೇ ವ್ಯವಸ್ಥೆಯ ಮೂಲಕ ಜನರೇಟ್ ಮಾಡಲಾಗುತ್ತದೆ.
ಸ್ಪೀಡ್ ರಾಡಾರ್ ಕ್ಯಾಮೆರಾ: ಸರಕಾರಿ ಅನುದಾನಿತ ಯೋಜನೆ ಯಡಿ ಜಿಲ್ಲೆಯ ಆರು ಪ್ರಮುಖ ಸ್ಥಳಗಳಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಎಎನ್‌ಪಿಆರ್(ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಾಗ್ನಸೇಶನ್) ಹಾಗೂ ವಾಹನಗಳ ವೇಗವನ್ನು ಪತ್ತೆಹಚ್ಚುವ ಸ್ಪೀಡ್ ರ್ಯಾಡಾರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈಗಾಗಲೇ ಕಾರ್ಕಳ - ದೂಪದಕಟ್ಟೆ, ಪಡುಬಿದ್ರಿ - ಉಚ್ಚಿಲ, ಕಾಪು - ದಂಡತೀರ್ಥ, ಕೋಟ - ತೆಕ್ಕಟ್ಟೆ, ಗಂಗೊಳ್ಳಿ - ತ್ರಾಸಿ, ಬೈಂದೂರು - ನಾಯಕನಕಟ್ಟೆಗಳಲ್ಲಿ ಈಗಾಗಲೇ ಕ್ಯಾಮೆರಾ ಅಳವಡಿಸಲಾಗಿದೆ.
ಎರಡನೇ ಹಂತದಲ್ಲಿ ಜಿಲ್ಲೆಯ ಎಂಟು ಪ್ರಮುಖ ಸ್ಥಳಗಳಲ್ಲಿ ಸುಮಾರು 1.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಲಾ ನಾಲ್ಕು ಕ್ಯಾಮೆರಾಗಳಂತೆ ಒಟ್ಟು 32 ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಾಚರಣೆಗೆ ಸಿದ್ಧಪಡಿಸ ಲಾಗುತ್ತಿದೆ. ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಜಮಾಡಿ, ಉಡುಪಿ- ನಿಟ್ಟೂರು, ಬೈಂದೂರು- ಶಿರೂರು, ಮಣಿಪಾಲ- ಪರ್ಕಳ, ಕಾರ್ಕಳ ಗ್ರಾಮಾಂತರ- ಬಜಗೋಳಿ, ಕಾರ್ಕಳ ನಗರ- ಸಾಣೂರು, ಹೆಬ್ರಿ- ಸೋಮೇಶ್ವರ, ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ.
ನೂತನ ಟ್ರಾಫಿಕ್ ಸಿಗ್ನಲ್: ಡಿ.ಪಿ.ಐ.ಎಫ್.ಎಸ್. ಸಲ್ಯೂಷನ್ಸ್ ಅವರ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 66ರ ಬಲಾಯಿಪಾದೆ ಮತ್ತು ಅಂಬಾಗಿಲಿನಲ್ಲಿ ನೂತನ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ.
ಕಲ್ಸಂಕ ಮತ್ತು ಅಂಬಾಗಿಲು ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿದ್ದು, ಮುಂದಿನ ದಿನಗಳಲ್ಲಿ ಪಡುಬಿದ್ರಿ, ಕರಾವಳಿ ಜಂಕ್ಷನ್, ಆಕಾಶವಾಣಿ, ಬ್ರಹ್ಮಾವರ, ಸಾಲಿಗ್ರಾಮ ಹಾಗೂ ಉಡುಪಿ, ಮಲ್ಪೆ ಮತ್ತು ಮಣಿಪಾಲ ವ್ಯಾಪ್ತಿಯಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಲಾಗಿದೆ. ಈ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ದೃಷ್ಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ನಿರ್ವಹಿಸಲಾಗುತ್ತದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಬ್ಯಾರಿಕೇಡ್‌ಗಳ ಆಧುನೀಕರಣ: ಕಳೆದ ಎರಡು ವರ್ಷಗಳ ಅಪಘಾತಗಳ ಅಂಕಿಅಂಶಗಳನ್ನು ಗಮನದಲ್ಲಿಟ್ಟು ಕೊಂಡು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಸಂಚಾರ ಸುರಕ್ಷತೆಯನ್ನು ಹೆಚ್ಚಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಸುಮಾರು 50 ಬ್ಯಾರಿಕೇಡ್‌ಗಳನ್ನು ಆಧುನೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದರೊಂದಿಗೆ ಅಪಘಾತ ಸಂಭವಿಸುವ ಸ್ಥಳಗಳ ಗುರುತಿಸುವಿಕೆ, ವೇಗ ನಿಯಂತ್ರಣ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.
ವಿಶೇಷ ಕಾವಲು ಪಡೆ: ದೃಷ್ಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ಜಿಲ್ಲೆಯಾದ್ಯಂತ ನಡೆಯುವ ಘಟನೆ ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ವಿಶೇಷ ಕಾವಲು ಪಡೆ ರಚಿಸಲಾಗಿದೆ. ಸಿಬ್ಬಂದಿಯವರು ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ತ್ವರಿತ ಪೊಲೀಸ್ ಪ್ರತಿಕ್ರಿಯೆ, ಸಂಚಾರ ನಿಯಂತ್ರಣ ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯ ಪೊಲೀಸ್ ನೆರವು ಒದಗಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಅಪಘಾತಗಳ ನಿಯಂತ್ರಣಕ್ಕೆ ಕ್ರಮ
ಉಡುಪಿ ಜಿಲ್ಲೆಯಲ್ಲಿ 2025ರಲ್ಲಿ ಒಟ್ಟು 1108(ಮಾರಣಾಂತಿಕ- 258, ಮಾರಾಣಾಂತಿಕವಲ್ಲ -850) ಅಪಘಾತ ಗಳು ಸಂಭವಿಸಿದ್ದು, ಇದರಲ್ಲಿ 266 ಮೃತಪಟ್ಟು, 1259 ಮಂದಿ ಗಾಯಗೊಂಡಿದ್ದಾರೆ. 2026ರಲ್ಲಿ ಒಟ್ಟು 917 (ಮಾರಣಾಂತಿಕ- 216, ಮಾರಾಣಾಂತಿಕವಲ್ಲ-701) ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 224 ಮಂದಿ ಮೃತಪಟ್ಟು, 1057 ಮಂದಿ ಗಾಯಗೊಂಡಿದ್ದಾರೆ.
ಈ ರಸ್ತೆ ಅಪಘಾತಗಳ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ, ಸಂಚಾರ ನಿಯಂತ್ರಣ, ತಂತ್ರಜ್ಞಾನ ಆಧಾರಿತ ಕಣ್ಗಾವಲು ಹಾಗೂ ರಸ್ತೆ ಸುರಕ್ಷತಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇಡೀ ಜಿಲ್ಲೆಗೆ ವಿಸ್ತರಣೆ: ಸಚಿವ ರಿಝ್ವಾನ್ ಅರ್ಷದ್
ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ಪತ್ತೆಗೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಕಂಟ್ರೋಲ್ ಸೆಂಟರ್‌ನ್ನು ಇಡೀ ಜಿಲ್ಲೆಗೆ ವಿಸ್ತರಿ ಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಸೆಂಟರ್‌ನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯ ಅಗತ್ಯವಿರುವ ಪ್ರಮುಖ ಸ್ಥಳಗಳು, ಜಂಕ್ಷನ್‌ಗಳನ್ನು ಗುರುತಿಸಿ ಹೈರೆಸಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಿ ಕಂಟ್ರೋಲ್ ರೂಮ್‌ಗೆ ಸಂಪರ್ಕ ಕಲ್ಪಿಸಬೇಕು. ಈ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಓ ಹಾಗೂ ಎಸ್ಪಿ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಯೋಜನೆ ರೂಪಿಸಲಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಿಲ್ಲೆಯಲ್ಲಿ ರೂಪುಗೊಂಡಿದೆ. ಶೀಘ್ರದಲ್ಲೇ ಇಡೀ ಜಿಲ್ಲೆಗೆ ಇದನ್ನು ವಿಸ್ತರಿಸಿ ಇಲ್ಲಿಂದಲೇ ಸಂಪೂರ್ಣ ಮೇಲ್ವಿಚಾರಣೆ ನಡೆಸುವ ಗುರಿ ಹೊಂದಲಾಗಿದೆ ಎಂದರು.






