ಉಡುಪಿ | ಪೊಲೀಸ್ ಕ್ರೀಡಾಕೂಟ : ಡಿಎಆರ್ ಚಾಂಪಿಯನ್

ಉಡುಪಿ, ನ.22: ನಗರದ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿಯ ಡಿಎಆರ್ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಪುರುಷರ ವಿಭಾಗದಲ್ಲಿ ಡಿಎಆರ್ ತಂಡದ ಜೀನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಉಡುಪಿ ಉಪವಿಭಾಗದ ನಾಗಶ್ರೀ ಇವರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಒಟ್ಟು ಐದು ತಂಡಗಳಾಗಿ ಸ್ಪರ್ಧಿಸಿದ್ದು, ಮೂರು ದಿನಗಳ ಕಾಲ ನಡೆದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ನಿನ್ನೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಕಾರ್ಕಳ ಉಪವಿಭಾಗದ ಎಎಸ್ಪಿ ಹರ್ಷ ಪ್ರಿಯಂವದಾ ಅವರು ಬಾಗವಹಿಸಿದ್ದರು.







