ಉಡುಪಿ: ಜ.10ರಿಂದ ಪವರ್ ಫುಡ್ ಕಾರ್ನಿವಲ್

ಉಡುಪಿ, ಜ.8: ಉಡುಪಿಯ ಮಹಿಳಾ ಉದ್ಯಮಿಗಳ ಸಂಘಟನೆಯಾದ ‘ಪವರ್’ ವತಿಯಿಂದ ಪವರ್ ಫುಡ್ ಕಾರ್ನಿವಲ್ -ಆಹಾರ ಮೇಳ- ಜ.10 ಮತ್ತು 11ರಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ ನಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಹಾಗೂ ಫುಡ್ ಕಾರ್ನಿವಲ್‌ನ ಅಧ್ಯಕ್ಷೆಯಾದ ಪ್ರಿಯಾ ಎಸ್. ಕಾಮತ್ ತಿಳಿಸಿದ್ದಾರೆ.
ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಹೊಸ ಪರಿಕಲ್ಪನೆ ಯೊಂದಿಗೆ ಪವರ್ ಫುಡ್ ಕಾರ್ನಿವಲ್‌ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಸ್ಥಳೀಯ ಆಹಾರ ಉದ್ಯಮಿಗಳು, ಮಹಿಳಾ ಆಹಾರ ಉದ್ಯಮಿಗಳು, ಹೊಸ ಜಿಲ್ಲೆಗಳ ಆಹಾರ ಉದ್ಯಮಿಗಳು ತಮ್ಮ ಪ್ರಾದೇಶಿಕ ಉತ್ಪನ್ನಗಳೊಂದಿಗೆ ಭಾಗವಹಿಸಲಿದ್ದಾರೆ ಎಂದರು.
ಈ ಆಹಾರ ಮೇಳದಲ್ಲಿ 60ಕ್ಕೂ ಅಧಿಕ ಸ್ಟಾಲ್‌ಗಳಿರುತ್ತವೆ. ಸಸ್ಯಾಹಾರ ಹಾಗೂ ಮಾಂಸಾಹಾರಗಳೆರಡರಲ್ಲೂ 100ಕ್ಕೂ ಅಧಿಕ ವೈವಿಧ್ಯಮಯ ತಿಂಡಿಗಳು, ಉತ್ಪನ್ನಗಳು, ಚಾಟ್ಸ್‌ಗಳು, ಐಸ್‌ಕ್ರೀಮ್‌ಗಳು ಇಲ್ಲಿ ಲಭ್ಯವಾಗಲಿವೆ. ಇದು ಬೆಳಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆಯವೆರೆಗೆ ತೆರೆದಿರುತ್ತವೆ ಎಂದು ಕಾರ್ಯಕ್ರಮ ಸಂಯೋಜಕಿಯಾಗಿರುವ ರೇಣು ಜಯರಾಮ್ ತಿಳಿಸಿದರು.
ಇದು ಕೇವಲ ಮಹಿಳಾ ಉದ್ಯಮಿಗಳಿಗೆ ಮಾತ್ರವಲ್ಲ. ಎಲ್ಲರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಜ.10ರಂದು ಬೆಳಗ್ಗೆ 11:30ಕ್ಕೆ ಫುಡ್ ಬ್ಲಾಗರ್ ಗಳು ಸೇರಿ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದ ರೇಣು ಜಯರಾಮ್ ತಿಳಿಸಿದರು.
ಆಹಾರ ಮೇಳದ ಅಧಿಕೃತ ಸಭಾ ಕಾರ್ಯಕ್ರಮ ಜ.11ರ ಸಂಜೆ 5:30ಕ್ಕೆ ನಡೆಯಲಿದೆ. ಇದರಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ಯಶಪಾಲ್ ಸುವರ್ಣ, ಜಿಪಂ ಸಿಇಓ ಪ್ರತೀಕ್ ಬಾಯಲ್, ನಗರಸಭಾ ಪೌರಾಯುಕ್ತ ಮಹಂತೇಶ್ ಹಂಗರಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್, ಡಿಐಸಿಯ ನಾಗರಾಜ್ ನಾಯಕ್, ಉದ್ಯಮಿಗಳಾದ ಸಂಧ್ಯಾ ಕಾಮತ್, ಹರಿಪ್ರಸಾದ್ ರೈ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪವರ್‌ನ ಪದಾಧಿಕಾರಿಗಳಾದ ತೃಪ್ತಿ ನಾಯಕ್, ಪ್ರದರ್ಶನ ಸಂಯೋಜಕಿ ಶಾಲಿನಿ ಬಂಗೇರ, ಮಾರ್ಕೆಟಿಂಗ್ ಸಂಯೋಜಕಿ ರೇವತಿ ನಾಡಗೀರ್ ಹಾಗೂ ಇತರರು ಉಪಸ್ಥಿತರಿದ್ದರು.







