ಉಡುಪಿ- ಪ್ರಯಾಗ್‌ರಾಜ್ ವಿಶೇಷ ರೈಲಿಗೆ ಚಾಲನೆ

ಉಡುಪಿ: ಉತ್ತರ ಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರನ್ನು ಕರೆದೊಯ್ಯುವ ಉಡುಪಿ- ಪ್ರಯಾಗ್‌ರಾಜ್ ವಿಶೇಷ ರೈಲಿಗೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಭಾಗದ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಿರುವ ಎಲ್ಲರಿಗೂ ಅಭಿನಂದನೆಗಳು. ಭಕ್ತರು ಪ್ರಯಾಣ ದಲ್ಲಿ ಮತ್ತು ಕುಂಭಮೇಳದಲ್ಲಿ ಅತ್ಯಂತ ಶಿಸ್ತಿನಿಂದ ಹಾಗೂ ಸಂಯಮದಿಂದ ವರ್ತಿಸಬೇಕು. ಯಾವುದೇ ರೀತಿ ಅವಘಡಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ಅಪರಾಹ್ನ ಉಡುಪಿಯಿಂದ ಹೊರಟ ಈ ರೈಲು ಬುಧವಾರ ಮುಂಜಾನೆ ಪ್ರಯಾಗ್‌ರಾಜ್ ತಲುಪಲಿದೆ. ಫೆ.20ರಂದು ಪ್ರಯಾಗರಾಜ್ ನಿಂದ ಹೊರಟು ಈ ರೈಲು ಫೆ.22ರಂದು ಸಂಜೆ 6:10ಕ್ಕೆ ಉಡುಪಿ ತಲುಪಲಿದೆ. ಒಟ್ಟು 23 ಕೋಚ್‌ಗಳ ಈ ವಿಶೇಷ ರೈಲಿನಲ್ಲಿ ಒಟ್ಟು 1476 ಮಂದಿ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ರೈಲ್ವೆ ಅಧಿಕಾರಿಗಳಾದ ಜೋಸೆಫ್ ಜಾರ್ಜ್, ದಿಲೀಪ್ ಡಿ.ಬಾರ್, ಸುಧಾ ಕೃಷ್ಣಮೂರ್ತಿ, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







