ಉಡುಪಿ | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಮತ್ತೆ ಮುಂದೂಡಿಕೆ

ಉಡುಪಿ : ಉಡುಪಿ ಜಿಲ್ಲಾ ‘ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ’ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೇ 30ರ ಶುಕ್ರವಾರ ಸಂಜೆ 4ಗಂಟೆಗೆ ಉಡುಪಿ ಮಿಷನ್ ಕಾಂಪೌಂಡ್‌ನಲ್ಲಿ ನಡೆಸಲುದ್ದೇಶಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆ -2025ರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮತ್ತೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಮಿತಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಮಾಯಕನೊಬ್ಬನ ಅಮಾನುಷ ಕೊಲೆಯ ಹಿನ್ನೆಲೆಯಲ್ಲಿ ಪ್ರತಿಕೂಲ ವಾತಾವರಣ ಇರುವ ಕಾರಣ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲು ‘ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ’ ಹೋರಾಟ ಸಮಿತಿ ವತಿಯಿಂದ ನಿರ್ಧರಿಸಲಾಗಿದೆ. ಈ ಕರಾಳ ಕಾನೂನನ್ನು ವಿರೋಧಿಸುವ ಪ್ರತಿಭಟನೆಯನ್ನು ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಎಲ್ಲಾ ಸಂಘಟನೆಗಳು, ಮಸೀದಿ, ಸಂಘ-ಸಂಸ್ಥೆಗಳು ಸಹಕರಿಸುವಂತೆ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.
ಈ ಹಿಂದೆ ಮೇ 13ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ, ಸೈನಿಕರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಮುಂದೂಡಲಾಗಿತ್ತು. ಇದೀಗ ಎರಡನೇ ಬಾರಿಗೆ ಪ್ರತಿಭಟನೆಯನ್ನು ಮುಂದೂಡಲಾಗಿದೆ.





