ಉಡುಪಿ | ಕಾಣೆಯಾದ ಬಾಲಕನನ್ನು ಪತ್ತೆ ಮಾಡಿದ ರೈಲ್ವೆ ಸಿಬ್ಬಂದಿ

ಉಡುಪಿ, ನ.22: ವಾಸ್ಕೋದಿಂದ ನಾಪತ್ತೆಯಾಗಿದ್ದ 14 ವರ್ಷ ಬಾಲಕನೊಬ್ಬನನ್ನು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್ ನಲ್ಲಿ ಮುಖ್ಯ ಟಿಕೇಟ್ ಪರೀಕ್ಷಕ ಪತ್ತೆ ಹಚ್ಚಿದ ಘಟನೆ ನ.20ರಂದು ಕೊಂಕಣ ರೈಲ್ವೆಯಲ್ಲಿ ವರದಿಯಾಗಿದೆ.
ರೈಲು ನಂ. 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಜನರಲ್ ಕೋಚ್ ನಲ್ಲಿ 14 ವರ್ಷ ಪ್ರಾಯದ ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ ಶಾಲಾ ಬ್ಯಾಗ್ನೊಂದಿಗೆ ಟಿಕೇಟ್ ಇಲ್ಲದೇ ಪ್ರಯಾಣಿಸುತ್ತಿರುವುದನ್ನು ಟಿಕೇಟ್ ತಪಾಸಣೆ ವೇಳೆ ಪತ್ತೆ ಹಚ್ಚಿದ ಮುಖ್ಯ ಟಿಕೇಟ್ ಪರೀಕ್ಷಕ ಪ್ರದೀಪ್ ಶ್ರೀಕೆ, ಆತನೊಂದಿಗೆ ನಯವಾಗಿ ಮಾತನಾಡಿ ಎಲ್ಲಾ ವಿವರಗಳನ್ನು ಸಂಗ್ರಹಿಸಿದರು.
ಬಾಲಕ ವಾಸ್ಕೊದ ತನ್ನ ಮನೆಯಿಂದ ಶಾಲಾ ಯುನಿಫಾರ್ಮ್ ಹಾಗೂ ಬ್ಯಾಗ್ನೊಂದಿಗೆ ಓಡಿ ಬಂದಿದ್ದು, ರೈಲಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿರುವುದನ್ನು ಅವರು ಆತನೊಂದಿಗಿನ ಮಾತುಕತೆಯಿಂದ ಅರಿತುಕೊಂಡರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರದೀಪ್, ರತ್ನಗಿರಿ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಹಾಗೂ ಸಿಸಿ ಸಿಬ್ಬಂದಿ ಅವರಿಗೆ ಬಾಲಕನನ್ನು ಒಪ್ಪಿಸಿ ಆತನ ಪೋಷಕರನ್ನು ಪತ್ತೆ ಹಚ್ಚುವಂತೆ ತಿಳಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು, ಬಾಲಕ ವಾಸ್ಕೋದ ಶಾಲೆಯಿಂದ ನಾಪತ್ತೆಯಾಗಿದ್ದು, ಆತನ ಹೆತ್ತವರು ಮಗನ ಪತ್ತೆಗಾಗಿ ಎಲ್ಲಾ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ಅರಿತರು.
ಬಳಿಕ ಬಾಲಕನ ಹೆತ್ತವರಿಗೆ ಮಾಹಿತಿ ನೀಡಿ, ಅವರ ವಶಕ್ಕೆ ಬಾಲಕನನ್ನು ಒಪ್ಪಿಸಲಾಯಿತು. ಕೊಂಕಣ ರೈಲ್ವೆ ಸಿಬ್ಬಂದಿಗಳ ಸಕಾಲಿಕ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.







