ಉಡುಪಿ | ಬಿ.ವಿ.ಆಚಾರ್ಯ, ಗೋಪಾಲ ಗಾಣಿಗ, ಡಾ. ಚಂದ್ರಶೇಖರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ.ಆಚಾರ್ಯ, ಗೋಪಾಲ ಗಾಣಿಗ, ಡಾ. ಚಂದ್ರಶೇಖರ್
ಉಡುಪಿ, ಅ.30: ಇಂದು ಪ್ರಕಟಗೊಂಡ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರಲ್ಲಿ ಉಡುಪಿ ಜಿಲ್ಲೆಯ ಮೂವರು ಸ್ಥಾನ ಪಡೆದಿದ್ದಾರೆ.
ನಾಡಿನ ಹಿರಿಯ ಹೈಕೋರ್ಟ್ ವಕೀಲರಲ್ಲಿ ಪ್ರಮುಖರಾಗಿರುವ ಬಿ.ವಿ. ಆಚಾರ್ಯ, ಬಡಗುತಿಟ್ಟು ಯಕ್ಷಗಾನ ರಂಗದ ಆಲ್ರೌಂಡರ್ ಎಂದೇ ಗುರುತಿಸಿಕೊಂಡ ಹೆರಂಜಾಲು ಗೋಪಾಲ ಗಾಣಿಗ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯ ಸ್ಥಾಪಕ, ಹಿರಿಯ ವೈದ್ಯ ಡಾ.ಜಿ.ಎಸ್. ಚಂದ್ರಶೇಖರ್ ಈ ಬಾರಿ ಪ್ರಶಸ್ತಿ ಪಡೆದವರಲ್ಲಿ ಸೇರಿದ್ದಾರೆ.
ಇವರಲ್ಲಿ ಬಿ.ವಿ.ಆಚಾರ್ಯರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪುನಲ್ಲಿ ಜನಿಸಿದರೂ, ಈಗ ಬೆಂಗಳೂರಿನ ಖಾಯಂ ನಿವಾಸಿ. ಅದೇ ರೀತಿ ಡಾ.ಚಂದ್ರಶೇಖರ್ ಅವರು ಹೊರಜಿಲ್ಲೆಯವರಾದರೂ ಇದೀಗ ಉಡುಪಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಉಡುಪಿಯವರೇ ಆಗಿದ್ದಾರೆ. ಗೋಪಾಲ ಗಾಣಿಗರು ಮಾತ್ರ ಕುಂದಾಪುರ ತಾಲೂಕಿನ ನಾಗೂರಿನಲ್ಲಿ ಜನಿಸಿ ಈಗ ಕಿರಿಮಂಜೇಶ್ವರದಲ್ಲಿ ವಾಸವಾಗಿದ್ದಾರೆ.
ಪರಿಚಯ...
ಬಿ.ವಿ.ಆಚಾರ್ಯ
ರಾಜ್ಯ ಕಾನೂನು ಕ್ಷೇತ್ರದ ಭೀಷ್ಮಾಚಾರ್ಯ
ಕರ್ನಾಟಕದಲ್ಲಿ ಸದ್ಯ ಕಾರ್ಯನಿರತರ ಹಿರಿಯ ನ್ಯಾಯವಾದಿಗಳಲ್ಲಿ ಇಂದು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಿ.ವಿ.ಆಚಾರ್ಯರು ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲುವವರಲ್ಲಿ ನಿಸ್ಸಂದೇಹವಾಗಿ ಒಬ್ಬರಾಗಿರು ತ್ತಾರೆ. ವಕೀಲಿ ವೃತ್ತಿಯಲ್ಲಿ ಆರು ದಶಕಗಳನ್ನು ಪೂರ್ಣಗೊಳಿಸಿರುವ 83ರ ಹರೆಯದ ಬಿ.ವಿ.ಆಚಾರ್ಯರು ಈಗಲೂ ಹೈಕೋರ್ಟ್ನಲ್ಲಿ ವಕೀಲರಾಗಿ ಸಕ್ರೀಯರಾಗಿದ್ದಾರೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪುವಿನಲ್ಲಿ 1933ರ ಡಿ.20ರಂದು ಕನ್ನಡ ಪಂಡಿತರಾಗಿದ್ದ ರಾಮಚಂದ್ರ ಆಚಾರ್ಯ ಹಾಗೂ ರತ್ನಮ್ಮ ದಂಪತಿಗಳ ಮಗನಾಗಿ ಜನಿಸಿದ ಬಿ.ವಿ.ಆಚಾರ್ಯರು ಮಂಗಳೂರು ರಥಬೀದಿಯ ಮುನ್ಸಿಪಲ್ ಸ್ಕೂಲ್ ಹಾಗೂ ಗಣಪತಿ ಹೈಸ್ಕೂಲ್ನಲ್ಲಿ ಆರಂಭಿಕ ಶಿಕ್ಷಣ ಪಡೆದು, 1954ರಲ್ಲಿ ಸೈಂಟ್ ಅಲೋಸಿಯಸ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಮದರಾಸು ಕಾನೂನು ಕಾಲೇಜಿನಲ್ಲಿ ಕಾನೂನು ಅಭ್ಯಾಸ ಮಾಡಿ ಮದರಾಸು ವಿವಿಯಿಂದ ಕಾನೂನು ಪದವಿ ಪಡೆದರು.
1957ರ ಆಗಸ್ಟ್ನಲ್ಲಿ ಮೈಸೂರು ಹೈಕೋರ್ಟ್ನಲ್ಲಿ ನ್ಯಾಯವಾದಿಯಾಗಿ ನೊಂದಣಿಗೊಂಡ ಬಿ.ವಿ.ಆಚಾರ್ಯರು, ಅಂದು ಮಂಗಳೂರಿನ ಪ್ರಮುಖ ನ್ಯಾಯವಾದಿಯಾಗಿದ್ದ ಬಿ.ಗಂಗಾಧರ ದಾಸ್ ಅವರ ಕೈಕೆಳಗೆ ಪ್ರಾಕ್ಟೀಸ್ ಪ್ರಾರಂಭಿಸಿ ಒಬ್ಬ ಸಮರ್ಥ ವಕೀಲರಾಗಿ ರೂಪುಗೊಂಡರು. 1961ರಿಂದ 65ರವರೆಗೆ ಮಂಗಳೂರಿನಲ್ಲಿ ವಕೀಲ ರಾಗಿದ್ದ ಇವರು ಮುಂದಿನ ಐದು ವರ್ಷ (1967ರಿಂದ 1972) ಸರಕಾರಿ ಪ್ಲೀಡರ್ ಆಗಿ ಕಾರ್ಯನಿರ್ವಹಿಸಿದರು.
1972ರಲ್ಲಿ ಬೆಂಗಳೂರು ಹೈಕೋರ್ಟ್ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಪ್ರಾರಂಭಿಸಿದ ಬಿ.ವಿ.ಆಚಾರ್ಯರು, ಇಂದಿನವರೆಗೂ ಅವಿಶ್ರಾಂತವಾಗಿ ಸಿವಿಲ್, ಕ್ರಿಮಿನಲ್ ಹಾಗೂ ಸಾಂವಿಧಾನಿಕ ವಿಷಯಗಳಲ್ಲಿ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. 1979-82ರ ಅವಧಿಯಲ್ಲಿ ರಾಜ್ಯ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಇವರ ಕಾಲದಲ್ಲಿ ಬೆಂಗಳೂರಿನಲ್ಲಿ ನೇಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸ್ಥಾಪನೆಗೊಂಡಿತ್ತು.
ರಾಜ್ಯದ ಪ್ರಮುಖ ವಕೀಲರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಿ.ವಿ.ಆಚಾರ್ಯರು ರಾಜ್ಯದಲ್ಲಿ ಹಲವು ತನಿಖಾ ಆಯೋಗದ ಎದುರು ವಾದಿಸಿದ್ದಾರೆ. ಎಂ.ವೀರಪ್ಪ ಮೊಯ್ಲಿ ಟೇಪ್ ಹಗರಣ, ಗಂಗಾರಾಮ್ ಕಟ್ಟಡ ದುರಂತ, ಬೆಂಗಳೂರು ವಿಮಾನ ದುರಂತ ತನಿಖೆಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಹೊಸದಿಲ್ಲಿಯಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲೂ ಅವರು ಮುಖ್ಯಮಂತ್ರಿ ಹಾಗೂ ಸಚಿವರ ಪರವಾಗಿ ವಾದಿಸಿದ್ದಾರೆ.
1992 ಹಾಗೂ 2007ರಲ್ಲಿ ಕರ್ನಾಟಕ ಸರಕಾರದ ಅಡ್ವೊಕೇಟ್ ಜನರಲ್ ಆಗಿ ನಿಯುಕ್ತಿಗೊಂಡಿದ್ದರು. 2007ರಲ್ಲಿ ಇವರಿಗೆ ರಾಜ್ಯದಲ್ಲಿ ಅತ್ಯುತ್ತಮ ಕಾನೂನು ಸೇವೆಗಾಗಿ ಎಸ್ಸೆಲ್-ಝೀ ಟಿವಿ ಪ್ರಶಸ್ತಿ ದೊರಕಿತ್ತು. 2009ರಲ್ಲಿ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದರೆ, 2009ರ ವಿಶ್ವ ತುಳು ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ಅದೇ ವರ್ಷ ಪುತ್ತಿಗೆಮಠ ಪರ್ಯಾಯ ಸಂದರ್ಭದಲ್ಲಿ ಅವರಿಗೆ ‘ನ್ಯಾಯಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
ಬಿ.ವಿ.ಆಚಾರ್ಯರ ಓರ್ವ ಪುತ್ರ ಹಾಗೂ ಪುತ್ರಿ ಅವರೂ ರಾಜ್ಯ ಹೈಕೋರ್ಟ್ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತಿದ್ದರೆ, ಮತ್ತೊಬ್ಬ ಪುತ್ರ ಸಂಗೀತ ಕ್ಷೇತ್ರದಲ್ಲಿದ್ದಾರೆ.
ಹೆರಂಜಾಲು ಗೋಪಾಲ ಗಾಣಿಗ
ಬಡಗುತಿಟ್ಟು ಯಕ್ಷಗಾನದ ಆಲ್ರೌಂಡರ್ ಹೆರಂಜಾಲು
ಯಕ್ಷಗಾನ ಕ್ಷೇತ್ರದಿಂದ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹೆರಂಜಾಲು ಗೋಪಾಲ ಗಾಣಿಗ, ಬಡಗುತಿಟ್ಟು ಯಕ್ಷಗಾನ ರಂಗದ ‘ಆಲ್ರೌಂಡರ್’. ಸುಮಧುರ ಕಂಠದ ಪ್ರೌಢ ಭಾಗವತರಾಗಿ ವಿಶೇಷವಾಗಿ ಗುರುತಿಸಿಕೊಳ್ಳುವ ಇವರು ಒಳ್ಳೆಯ ಮದ್ದಳೆಗಾರರೂ ಹೌದು, ಜೊತೆಗೆ ಯಕ್ಷಗುರುಗಳು. ತಂದೆಯಿಂದ ಕಲಿತ ಹೆಜ್ಜೆಗಾರಿಕೆ ಮೂಲಕ ಉತ್ತಮ ವೇಷಧಾರಿಯಾಗಿಯೂ ಇವರು ಜನಮನ್ನಣೆ ಪಡೆದಿದ್ದಾರೆ.
63ರ ಹರೆಯದ ಗೋಪಾಲ ಗಾಣಿಗರ ತಂದೆ ಹೆರಂಜಾಲು ವೆಂಕಟರಮಣ ಗಾಣಿಗ ಬಡಗು ತಿಟ್ಟು ಸಂಪ್ರದಾಯದಲ್ಲಿ ಪ್ರಸಿದ್ಧ ವೇಷಧಾರಿಯಾಗಿದ್ದರು. ಬೈಂದೂರು ತಾಲೂಕು ನಾಗೂರು ಸಮೀಪ ಹೆರಂಜಾಲಿನ ವೆಂಕರಮಣ ಗಾಣಿಗ- ಗಣಪು ಗಾಣಿಗ ದಂಪತಿ ಪುತ್ರರಾಗಿ 1963ರಲ್ಲಿ ಜನಿಸಿದ ಗೋಪಾಲ ಗಾಣಿಗರ ಶಾಲಾ ಕಲಿಕೆ 4ನೇ ಕ್ಲಾಸಿಗೆ ಮುಗಿತ್ತು. ಮುಂದೆಲ್ಲಾ ರಂಗಸ್ಥಳದ ಕಲಿಕೆ ಮಾತ್ರ. ತಂದೆಯವರಿಂದಾಗಿ ಗೋಪಾಲ ಗಾಣಿಗರಿಗೆ ಯಕ್ಷವಿದ್ಯೆ ರಕ್ತಗತವಾಗಿ ಬಂದಿತ್ತು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀರಾವರ ರಾಮಕೃಷ್ಣಯ್ಯ ಅವರಲ್ಲಿ ಭಾಗವತಿಕೆ ಹಾಗೂ ಮಹಾಬಲ ಕಾರಂತರ ದಲ್ಲಿ ಮದ್ದಲೆಗಾರಿಕೆಯನ್ನು ಕಲಿತರು. ತಂದೆಯಿಂದ ಕಲಿತ ಕುಣಿತ ಅವರ ಬೆನ್ನಿಗಿತ್ತು. ಹೀಗೆ ಯಕ್ಷಗಾನದ ಎಲ್ಲಾ ಅನುಭವದೊಂದಿಗೆ ಅವರು ಕಲಾಲೋಕದ ಚೈತ್ರಯಾತ್ರೆ ಪ್ರಾರಂಭಿಸಿದರು.
ತಮ್ಮ 15ನೇ ಹರೆಯದಲ್ಲಿ ವೃತ್ತಿರಂಗ ಪ್ರವೇಶಿಸಿದ ಅವರು ಈಗಾಗಲೇ 45 ವರ್ಷಗಳ ಕಲಾನುಭವ ಹೊಂದಿ ದ್ದಾರೆ. ಮಾರಣಕಟ್ಟೆ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ, ಸಾಲಿಗ್ರಾಮ, ಶಿರಸಿ ಮೇಳಗಳಲ್ಲಿ ದುಡಿದ ಗೋಪಾಲ ಗಾಣಿಗರು, ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಭಾಗವತ ರಾಗಿದ್ದಾರೆ. ಇವರಿಗೆ ಜಾನಪದ ಲೋಕ ಪ್ರಶಸ್ತಿ, ಯಕ್ಷಧ್ರುವ ಪ್ರಶಸ್ತಿ,, ಕಲಾ ಗೌರವ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಹಿಮ್ಮೇಳ-ಮುಮ್ಮೇಳ ಎರಡರಲ್ಲೂ ಮಾಗಿದ ಗೋಪಾಲ ಗಾಣಿಗರು ತಮ್ಮ ಎಳೆಯ ಪ್ರಾಯದಲ್ಲಿ ಅಭಿಮನ್ಯು, ಬಬ್ರುವಾಹನ, ಪ್ರಹ್ಲಾದ, ಶ್ರೀಕೃಷ್ಣ, ವೃಷಸೇನ ಮುಂತಾದ ಪಾತ್ರಗಳನ್ನು ಚೊಕ್ಕವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸುತಿದ್ದರು. ಭಾಗವತಿಕೆಯಲ್ಲಿ ಇವರ ಪ್ರಮುಖ ವೈಶಿಷ್ಯ್ಯವೆಂದರೆ ಸಂಪ್ರದಾಯಬದ್ಧ ಶೈಲಿ, ಲಯಬದ್ಧತೆ, ರಾಗತಾಳಗಳ ಮೇಲಿನ ಹಿಡಿತ ಹಾಗೂ ಸಾಹಿತ್ಯದ ಸ್ಪಷ್ಟ ಅಭಿವ್ಯಕ್ತಿ.
ಯಕ್ಷಗಾನ ಮುಂದಿನ ಪೀಳಿಗೆಗೂ ಉಳಿಯಬೇಕು ಎಂಬ ಉದ್ದೇಶದಿಂದ ಹೆರಂಜಾಲು ಯಕ್ಷಗಾನ ಪ್ರತಿಷ್ಠಾನದ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತಿದ್ದಾರೆ. ಯಕ್ಷಗಾನ ಬಗ್ಗೆ ಆಸಕ್ತಿ ಹೊಂದಿರುವ ಮಕ್ಕಳಿಗೆ ಭಾಗವತಿಕೆ, ತಾಳ, ಲಯ, ಸಾಹಿತ್ಯ ಹಾಗೂ ವಿವಿಧ ಕಲಾಪ್ರಕಾರಗಳ ಕುರಿತು ಮಾರ್ಗದರ್ಶನ ನೀಡುತಿದ್ದಾರೆ.
"ಯಕ್ಷಗಾನ ಕ್ಷೇತ್ರದಲ್ಲಿ 40-50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಈ ವರ್ಷ ಮೇಳದಿಂದ ನಿವೃತ್ತಿ ಪಡೆಯಲಿದ್ದೇನೆ. ಈ ಸಮಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ತಂದೆಯವರಿಗೆ (ಹೆರಂಜಾಲು ವೆಂಕಟರಮಣ ಗಾಣಿಗ) 75ನೇ ವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು".
-ಗೋಪಾಲ ಗಾಣಿಗ ಹೆರಂಜಾಲು
ಡಾ.ಜಿ.ಎಸ್.ಚಂದ್ರಶೇಖರ್
ವೈದ್ಯಕೀಯ ಕ್ಷೇತ್ರಕ್ಕೆ ಮಾನವೀಯತೆ ಸ್ಪರ್ಶ ಡಾ.ಚಂದ್ರಶೇಖರ
ವೈದ್ಯಕೀಯ ಸೇವೆ, ಶಿಕ್ಷಣ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಸಮನ್ವಯದ ಪ್ರತೀಕವಾಗಿರುವ ಹಿರಿಯ ವೈದ್ಯ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಡಾ.ಜಿ.ಎಸ್.ಚಂದ್ರಶೇಖರ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
1963ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಇವರು ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್, ಮೈಸೂರಿನ ಸರಕಾರಿ ವೈದ್ಯಕೀಯ ಕಾಲೇಜಿನಿಂದ ಎಂಡಿ (ಇಂಟರ್ನಲ್ ಮೆಡಿಸಿನ್) ಪಡೆದರು.1991ರಲ್ಲಿ ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ಸುಮಾರು 15ವರ್ಷಗಳ ಕಾಲ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
2005ರಲ್ಲಿ ಉಡುಪಿಯಲ್ಲಿ 60 ಹಾಸಿಗೆಗಳ ಆದರ್ಶ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ತಮ್ಮ ವೈದ್ಯಕೀಯ ಸೇವೆಗೆ ಹೊಸ ಆಯಾಮ ನೀಡಿದ ಡಾ.ಚಂದ್ರಶೇಖರ್, ಜನರ ಅಗತ್ಯತೆಗಲನ್ನು ಮನಗಂಡು ಅದನ್ನು ವಿಸ್ತರಿಸುತ್ತಾ ಬಂದಿದ್ದು, ಆದರ್ಶ ಆಸ್ಪತ್ರೆ ಈಗ 200 ಹಾಸಿಗೆಗಳ ಸುಸಜ್ಜಿತ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದು ನಿಂತಿದೆ.
ಆರೋಗ್ಯ ಎಲ್ಲರ ಹಕ್ಕು. ವೈದ್ಯಕೀಯ ಸೇವೆ ಮಾನವೀಯತೆಯೊಂದಿಗೆ ಸಾಗಬೇಕು ಎಂಬ ಆಶಯವನ್ನು ತಮ್ಮ ಕಾರ್ಯದ ಮೂಲಕ ಸಾಕಾರಗೊಳಿಸುತ್ತಿರುವ ಡಾ.ಚಂದ್ರಶೇಖರ್ ವೈದ್ಯರಾಗಿ ಮಾತ್ರವಲ್ಲ, ಶಿಕ್ಷಣ ತಜ್ಞರಾಗಿ, ಸಮಾಜ ಸೇವೆಗಾಗಿಯೂ ಉಡುಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಆದರ್ಶ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾಗಿರುವ ಇವರು ನರ್ಸಿಂಗ್, ಅಲೈಡ್ ಹೆಲ್ತ್ ಸಾಯನ್ಸ್ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಕ್ಷೇತ್ರದಲ್ಲೂ ಯುವ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶ್ರಮಿಸುತಿದ್ದಾರೆ.






