Udupi | ಯಕ್ಷಗುರು ಕೃಷ್ಣಸ್ವಾಮಿ ಜೋಯಿಸ್ ನಿಧನ

ಬ್ರಹ್ಮಾವರ, ಆ.4: ಪ್ರಸಿದ್ಧ ಯಕ್ಷಗುರು, ಸಾಂಪ್ರದಾಯಿಕ ಮದ್ದಳೆವಾದಕ ಕೃಷ್ಣಸ್ವಾಮಿ ಜೋಯಿಸ್ (75) ಮಂಗಳವಾರ ಮುಂಜಾನೆ ಚಾಂತಾರಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.
ಬ್ರಹ್ಮಾವರ ಆಸುಪಾಸಿನ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದ ಇವರು, ಗಣಪತಿ ಮೂರ್ತಿಗಳ ತಯಾರಿಯಲ್ಲೂ ಸಿದ್ಧಹಸ್ತರಾಗಿದ್ದರು. ಅದೇ ರೀತಿ ಪ್ರಸಾಧನ ತಜ್ಞರಾಗಿಯೂ ಜನಪ್ರಿಯರಾಗಿದ್ದರು.
ಕಾಳಿಂಗ ನಾವಡ ಸೇರಿದಂತೆ ಬಡಗುತಿಟ್ಟಿನ ಅನೇಕ ಪ್ರಮುಖ ಕಲಾವಿದರ ಒಡನಾಡಿಯಾಗಿದ್ದ ಜೋಯಿಸ್, ಯಕ್ಷಗಾನದ ವಿಚಾರದಲ್ಲಿ ಅನೇಕ ಸೂಕ್ಷ್ಮಗಳನ್ನು ಬಲ್ಲವರಾಗಿದ್ದರು.
ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ವಿವಿಧ ಸೇವೆಗಳಿಗಾಗಿ ಉಡುಪಿ ಯಕ್ಷಗಾನ ಕಲಾರಂಗ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.
ಜೋಯಿಸ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story




