ಉಡುಪಿ | ಕೇರಳ ಮೂಲದ ಮನೋರೋಗಿ ಪದವೀಧರೆಯ ರಕ್ಷಣೆ

ಉಡುಪಿ ಡಿ.5: ಪ್ರತಿಷ್ಟಿತ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಮೂರು ಪದವಿ ಪಡೆದ ಕೇರಳ ಮೂಲದ ಯುವತಿಯೊಬ್ಬಳು ಉಡುಪಿ ನಗರದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಡಾಡುತ್ತಿದ್ದ ಯುವತಿಯನ್ನು ಸಾರ್ವಜನಿಕರು ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ ಉಡುಪಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿಯನ್ನು ರೇಷ್ಮ ಎಂದು ಗುರುತಿಸಲಾಗಿದೆ. ಬಿಎಸ್ಸಿ, ಎಂಎಸ್ಸಿ, ಎಂಬಿ.ಎ ಪದವಿ ಪಡೆದಿದ್ದ ಈಕೆ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ವೇತನ ಪಡೆಯುತ್ತಿದ್ದರು. ಮಗಳ ಈ ಸ್ಥಿತಿ ತಿಳಿದು ಹೆತ್ತವರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಇದೀಗ ಯುವತಿಯ ತಂದೆ ಪತ್ತೆಯಾಗಿದ್ದು, ಆಕೆಯನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಆಕೆಯನ್ನು ಕ್ಲಿಪ್ತ ಸಮಯದಲ್ಲಿ ರಕ್ಷಿಸಿದ್ದರಿಂದ ಸಂಭವನೀಯ ದುರಂತ ತಪ್ಪಿದೆ ಎಂದು ತಂದೆ ವಿಶುಶೆಟ್ಟಿಯವರಲ್ಲಿ ಹೇಳಿಕೆ ನೀಡಿದ್ದಾರೆ. ರಾತ್ರಿ ಹೊತ್ತು ದುರಂತ ತಪ್ಪಿಸಿ ಆಸ್ಪತ್ರೆಗೆ ದಾಖಲಿಸಿದ ವಿಶುಶೆಟ್ಟಿ ಪೋಲಿಸ್ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಷಯ ತಿಳಿದ ಕೂಡಲೆ ಯುವತಿಯ ತಂದೆ ಕೇರಳದಿಂದ ಕಾರಿನ ಮೂಲಕ ತಕ್ಷಣ ಹೊರಟು ಉಡುಪಿಗೆ ಬಂದಿದ್ದಾರೆ. ಇದೀಗ ತುರ್ತು ಚಿಕಿತ್ಸೆಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಮುಂದುವರೆಸಿದ್ದಾರೆ.







