ಉಡುಪಿ | ಜಿಲ್ಲೆಯಲ್ಲಿ ಪ್ರವಾಹ, ಅತಿವೃಷ್ಠಿ ಹಾನಿಗಳಿಗೆ ತ್ವರಿತವಾಗಿ ಸ್ಪಂದಿಸಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ವಿಡಿಯೋ ಸಂವಾದದಲ್ಲಿ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ

ಉಡುಪಿ : ಅತಿವೃಷ್ಟಿಯಿಂದ ಉಂಟಾಗುವ ಪ್ರವಾಹ, ಅದರಿಂದಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಅಂತಹ ಸಂದರ್ಭದಲ್ಲಿ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಜನ, ಜಾನುವಾರುಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫ್‌ರೆನ್ಸ್ ಸಭಾಂಗಣದಲ್ಲಿ ಮಳೆಹಾನಿ ಬಗ್ಗೆ ಚರ್ಚಿಸಲು ಅಧಿಕಾರಿಗಳೊಂದಿಗೆ ಆನ್‌ಲೈನ್ ಮೂಲಕ ವಿಡಿಯೋ ಸಂವಾದದಲ್ಲಿ ಸಚಿವೆ ಮಾತನಾಡಿದರು.
ಈ ಬಾರಿ ಅವಧಿಗೆ ಮುನ್ನವೇ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ನಿರೀಕ್ಷೆಗಿಂತ ಅಧಿಕವಾಗಿ ಸುರಿಯುತ್ತಿದೆ. ಜನವರಿಯಿಂದ ಇಂದಿನವರೆಗೆ ವಾಡಿಕೆಯಂತೆ 177.4 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 801.7ಮಿ.ಮೀ. ಮಳೆ ಸುರಿದಿದೆ. ಇದು ವಾಡಿಕೆಗಿಂತ ಮೂರು ಪಟ್ಟು ಅಧಿಕವಾಗಿದೆ ಎಂದು ಸಚಿವೆ ತಿಳಿಸಿದರು.
ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರವಾಹ, ಅತಿವೃಷ್ಟಿ ಸಮಸ್ಯೆಗಳನ್ನು ಎದುರಿಸಲು ಅಗತ್ಯವಾಗಿರುವ ಎಲ್ಲಾ ರೀತಿಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಂಡು ಯಾವುದೇ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳು ದಿನದ 24ಗಂಟೆಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಮಳೆಹಾನಿ ದೂರು ಬಂದಲ್ಲಿ ಕೂಡಲೇ ಅದಕ್ಕೆ ಸ್ಪಂದಿಸಬೇಕು. ಅತಿವೃಷ್ಠಿಯಿಂದ ತೊಂದರೆಗೊಳಗಾದವರಿಗೆ ಪರಿಹಾರವನ್ನು ಸಹತ್ವರಿತವಾಗಿ ನೀಡಬೇಕು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಿಸಿದರು.
ವಾರಾಹಿ ಜಲಾಶಯದ ನೀರಿನ ಮಟ್ಟ ಹಾಗೂ ಒಳಹರಿವಿನ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿರಬೇಕು. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾದಲ್ಲಿ ಮುಂಚಿತವಾಗಿಯೇ ತಿಳಿಸಿ, ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು. ಇದರಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಗೆ ಹೊರಗಿನಿಂದ ಆಗಮಿಸುವ ಪ್ರವಾಸಿಗರಿಗೆ ಕಡಲ ತೀರ ಹಾಗೂ ಹಳ್ಳ, ಕೊಳ್ಳ, ಜಲಪಾತಗಳ ಬಗ್ಗೆ ಅರಿವಿಲ್ಲದೇ ಪ್ರಾಣಹಾನಿ ಪ್ರಕರಣಗಳು ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಾರ್ವನಿಕರಿಗೆ ಮುನ್ಸೂಚನೆ ನೀಡುವ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಸಾಧ್ಯವಾದಲ್ಲಿ ಸಿಬ್ಬಂದಿಗಳ ನಿಯೋಜನೆಯನ್ನು ಮಾಡಬೇಕು ಎಂದವರು ಸೂಚನೆ ನೀಡಿದರು.
ಕಾನೂನು ಸುವ್ಯವಸ್ಥೆಗೆ ಸೂಚನೆ :
ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯ ಗಡಿಭಾಗದ ಸಮೀಪ ಸಹ ಸಣ್ಣ-ಪುಟ್ಟ ಪ್ರಕರಣಗಳು ಆಗಿರುವುದು ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವ್ಯವಸ್ಥಿತವಾಗಿರುವಂತೆ ಕ್ರಮ ವಹಿಸಬೇಕು. ಅನಗತ್ಯವಾಗಿ ಕಾನೂನು ಉಲ್ಲಂಘಿಸುವ ಘಟನೆಗಳು ನಡೆಯದ ಹಾಗೆ ಎಚ್ಚರ ವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸತ್ಯವತಿ ಜಿ. ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇಂದ್ರಸ್ಥಾನಗಳಲಿದ್ದು, ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳಲು ಕಾರ್ಯಪ್ರವೃತ್ತರಾಗಬೇಕು. ಜನಸಾಮಾನ್ಯರಿಗೆ ಸ್ಪಂದಿಸಲು ಅನುಕೂಲವಾಗುವ ಹಾಗೆ ತಮ್ಮ ಮೊಬೈಲ್ ಅನ್ನು ದಿನದ 24 ಗಂಟೆಯೂ ಸಕ್ರೀಯವಾಗಿ ಇಟ್ಟುಕೊಂಡು ದೂರು ಬಂದಾಗ ತಕ್ಷಣ ಸ್ಪಂದಿಸಬೇಕೆಂದರು.
ಕಂಟ್ರೋಲ್ ರೂಂಗಳ ನಂಬರ್‌ಗಳೂ ಸಹಜವಾಗಿ ಜನರ ಮನಸ್ಸಿನಲ್ಲಿ ಇರುವ ಹಾಗೆ ಸರಳವಾಗಿರಬೇಕು. ಅವುಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರೊಂದಿಗೆ ಸ್ಪಂದಿಸಬೇಕು ಎಂದ ಸಚಿವರು, ಮಳೆಯಿಂದ ಉಂಟಾಗುವ ವಿದ್ಯುಚ್ಛಕ್ತಿ ಅವಘಡಗಳು ಆಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯುತ್ ಕಡಿತ ಉಂಟಾದಾಗ ಮರು ಸಂಪರ್ಕಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಆಗಿರುವ ಮಳೆ, ಹಾನಿ ಸೇರಿದಂತೆ ಸಂಬಂಧಿತ ವಿವರಗಳನ್ನು ತಿಳಿಸುವುದರೊಂದಿಗೆ ಪ್ರಕೃತಿ ವಿಕೋಪ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಕೈಗೊಂಡ ತಯಾರಿ ಬಗ್ಗೆ ವಿವರಿಸಿದರು. ಪ್ರಮುಖ ಪ್ರವಾಸಿ ತಾಣಗಳಲ್ಲಿ ಜೂನ್ ಆರಂಭದಿಂದಲೇ ಮೂವತ್ತಕ್ಕೂ ಹೆಚ್ಚು ಗೃಹ ರಕ್ಷಕ ದಳದವರನ್ನು ನಿಯೋಜಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಡಿಎಫ್‌ಓ ಗಣಪತಿ, ಸಹಾಯಕ ಕಮಿಷನರ್ ರಶ್ಮಿ ಎಸ್., ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ತಹಶೀಲ್ದಾರರು ಹಾಗೂ ಇತರರು ಉಪಸ್ಥಿತರಿದ್ದರು.







