ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಗೆ 21ಲಕ್ಷ ಆನ್ಲೈನ್ ವಂಚನೆ

ಸಾಂದರ್ಭಿಕ ಚಿತ್ರ
ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಕುಂದಾಪುರ ತಲ್ಲೂರಿನ ರಘುರಾಮ ಶೆಟ್ಟಿ (72) ಎಂಬವರು ನ.28ರಂದು ಫೇಸ್ಬುಕ್ನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಆಫ್ ಬರೋಡದಿಂದ ವಿವಿಧ ಸವಲತ್ತುಗಳನ್ನು ಒದಗಿಸುವ ಕಾರ್ಡ್ ಕುರಿತ ಜಾಹೀರಾತು ನೋಡಿದ್ದು, ಬಳಿಕ ಅದರಲ್ಲಿದ್ದ ಲಿಂಕ್ ಒಪನ್ ಮಾಡಿದ್ದರು.
ನಂತರ ನ.29ರಂದು ರಘುರಾಮ ಶೆಟ್ಟಿ ಅವರ ಮೊಬೈಲ್ಗೆ ಬ್ಯಾಂಕ್ ಆಫ್ ಬರೋಡ ಅಲ್ಕಾಪುರಿ, ಗುಜರಾತ್ನಿಂದ ಮಾತನಾಡುತ್ತಿರುವುದಾಗಿ ಅಪರಿಚಿತ ಕರೆ ಮಾಡಿದ್ದು, ಬಳಿಕ ಜಾಹೀರಾತುವಿನಲ್ಲಿನ ಸೌಲಭ್ಯಗಳನ್ನು ತಿಳಿಸಿದ್ದನು. ಆತ ಅವರ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬ್ರ, ಈ-ಮೇಲ್ ಹಾಗೂ ಇತರೆ ವೈಯುಕ್ತಿಕ ವಿವರಗಳನ್ನು ಭರ್ತಿಗೊಳಿಸುವಂತೆ ತಿಳಿಸಿದ್ದು, ಅದರಂತೆ ರಘುರಾಮ ಶೆಟ್ಟಿ ವಿವರ ಭರ್ತಿಗೊಳಿಸಿ ಹಾಗೂ ಬ್ಯಾಂಕ್ ಒಟಿಪಿಯನ್ನು ಅಪರಿಚಿತನೊಂದಿಗೆ ಹಂಚಿಕೊಂಡರು.
ಅನಂತರದಲ್ಲಿ ರಘುರಾಮ ಶೆಟ್ಟಿಯ ಬ್ಯಾಂಕ್ ಖಾತೆಯಿಂದ ಒಟ್ಟು 21,28,055.86ರೂ. ಹಣವನ್ನು ಅಪರಿಚಿತ ತನ್ನ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ.





