Udupi | ಜೂ. 20ರಿಂದ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭ; ಜೂ. 30ರಿಂದ ಮನೆ-ಮನೆ ಭೇಟಿ: ಡಿಸಿ ಸ್ವರೂಪ ಟಿ.ಕೆ.

ಉಡುಪಿ, ಜೂ.2: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಜೂನ್ 20ರಿಂದ ಪ್ರಾರಂಭಗೊಳ್ಳಲಿದ್ದು, 30ರಿಂದ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ಎಸ್‌ಐಆರ್ ಕುರಿತು ಅವರು ಮಾಹಿತಿಗಳನ್ನು ಹಂಚಿಕೊಂಡರು. ವಿಶೇಷ ಸಮಗ್ರ ಪರಿಷ್ಕರಣೆಗೆ ಮುಂದಿನ ಅ.1 ಅರ್ಹತಾ ದಿನವಾಗಿದ್ದು, ಅ.7ರಂದು ಅಂತಿಮ ಹೊಸ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ 2002ನೇ ಸಾಲಿನಲ್ಲಿ ಕೊನೆಯ ಬಾರಿಗೆ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಡೆಸ ಲಾಗಿತ್ತು. ಬಿಹಾರ, ಪಶ್ಚಿಮ ಬಂಗಾಳದ ಬಳಿಕ ಇದೀಗ ದೇಶದ 16 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಭಾರತ ಚುನಾವಣಾ ಆಯೋಗವು 2021ರ ಡಿಸೆಂಬರ್ ನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1950ರ ನಿಯಮ 11ಬಿಗೆ ತರಲಾದ ತಿದ್ದುಪಡ್ಡಿ ಯಂತೆ ಜನವರಿ1, ಎಪ್ರಿಲ್ 1, ಜುಲೈ1 ಹಾಗೂ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕಗಳಾಗಿ ನಿಗದಿ ಪಡಿಸಿದೆ ಎಂದವರು ವಿವರಿಸಿದರು.
ಎಸ್‌ಐಆರ್ ಗುರಿ: ಯಾವುದೇ ಅರ್ಹ ಮತದಾರನನ್ನು ಪಟ್ಟಿಯಿಂದ ಕೈ ಬಿಡುವಂತಿಲ್ಲ ಹಾಗೂ ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತಿಲ್ಲ ಎಂಬುದು ಎಸ್‌ಐಆರ್‌ನ ಗುರಿಯಾಗಿದೆ ಎಂದರು.
ಮೊದಲ ಹಂತದಲ್ಲಿ ಜೂ.20ರಿಂದ 29ರವರೆಗೆ ಜಿಲ್ಲಾ ಚುನಾವಣಾಧಿಕಾರಿ, ಅಪರ ಜಿಲ್ಲಾ ಚುನಾವಣಾಧಿಕಾರಿ ಸೇರಿದಂತೆ ಮತದಾರರ ನೊಂದಣಾಧಿಕಾರಿಗಳು, ಸಹಾಯಕ ನೊಂದಣಾದಿಕಾರಿಗಳು, ಚುನಾವಣಾ ತಹಶೀಲ್ದಾರ್, ಮಾಸ್ಟರ್ ತರಬೇತುದಾರ, ಬೂತ್ ಮಟ್ಟದ ಅಧಿಕಾರಿಗಳಿಗೆ ಅವರ ಮೇಲ್ವಿಚಾರಕರಿಗೆ ಹಾಗೂ ಬೂತ್ ಮಟ್ಟದ ಏಜೆಂಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಈ ವೇಳೆ ಗಣತಿ ನಮೂನೆಯನ್ನು ಬಿಎಲ್‌ಒಗೆ ಮತದಾರರ ಮನೆಮನೆಗೆ ವಿತರಿಸಲು ನೀಡಲಾಗುತ್ತದೆ.
ಜೂ.30ರಿಂದ ಜು.29ರವರೆಗೆ ಬಿಎಲ್‌ಒ ಮತದಾರರ ಪಟ್ಟಿಯಲ್ಲಿರು ವಂತೆ ಪ್ರತಿಯೊಬ್ಬ ಮತದಾರರಿಗೆ (ಮನೆಯಲ್ಲಿರುವ ಪ್ರತಿಯೊಬ್ಬ ಮತದಾರ ನಿಗೆ) ಗಣತಿ ಫಾರಂ ನೀಡಿ, ಭರ್ತಿ ಮಾಡಲು ಮಾರ್ಗದರ್ಶನ ನೀಡಬೇಕು. ಇದಕ್ಕಾಗಿ ಬೀಗ ಹಾಕಿರುವ ಮನೆಗೆ ಆತ ಮೂರು ಬಾರಿ ಭೇಟಿ ನೀಡಬೇಕಾ ಗುತ್ತದೆ. ಮತದಾರ ಗಣತಿ ನಮೂನೆಯನ್ನು ಭರ್ತಿ ಮಾಡಿ ಬಿಎಲ್‌ಒಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಮನೆಯಲ್ಲಿರುವ ಎಲ್ಲಾ ಮತದಾರರ ಫಾರಂನ್ನು ದ್ವಿಪ್ರತಿಯಲ್ಲಿ ಒಬ್ಬನೇ ಬಿಎಲ್‌ಒಗೆ ಸಲ್ಲಿಸಿ ಆತನ ಸಹಿಯೊಂದಿಗೆ ಸ್ವೀಕೃತಿಯನ್ನು ಪಡೆಯಬೇಕು.
ಗಣತಿ ಫಾರಂನ್ನು ಯಾವುದೇ ದಾಖಲೆಗಳಿಲ್ಲದೇ ಸಂಪೂರ್ಣ ತುಂಬಿಸಿ ಬಿಎಲ್‌ಒಗೆ ಮರಳಿಸಿ ಆತನಿಂದ ಸ್ವೀಕೃತಿ ಯನ್ನು ಪಡೆಯುವುದು ಎಸ್‌ಐಆರ್ ಪ್ರಕ್ರಿಯೆ ಪ್ರಮುಖ ಘಟ್ಟ. ಇದೇ ಆತನ ಹೆಸರು ಮತದಾರರ ಪಟ್ಟಿಯಲ್ಲಿ ರುವುದನ್ನು ಖಚಿತ ಪಡಿಸುತ್ತದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಗಣತಿ ನಮೂನೆಯನ್ನು ಸಲ್ಲಿಸಲು ವಿಫಲರಾಗುವ ಮತದಾರರನ್ನು ಮತಗಟ್ಟೆವಾರು ಎಂದು ಪಟ್ಟಿ ಮಾಡಿ ಗ್ರಾಪಂ ಕಚೇರಿ, ತಾಲೂಕು ಕಚೇರಿ, ತಾಪಂ ಕಚೇರಿ, ನಗರಸ್ಥಳೀಯ ಸಂಸ್ಥೆ ಕಚೇರಿಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದಿಲ್ಲ.
ಗಣತಿ ನಮೂನೆಯಲ್ಲಿ ಒದಗಿಸಲಾದ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಗಳ ವಿವರಗಳು ಲಭ್ಯವಿಲ್ಲದಿದ್ದರೆ ಅಥವಾ ಡೇಟಾಬೇಸ್‌ಗೆ ಹೊಂದಿಕೆ ಯಾಗದ ಮತದಾರರಿಗೆ ಇಆರ್‌ಒ ನೋಟೀಸು ನೀಡುತ್ತಾರೆ. ನೋಟೀಸು ಸ್ವೀಕರಿಸಿದ ಬಳಿಕ ಆ ಮತದಾರ ಕೆಳಗಿನ ವರ್ಗಗಳ ಆಧಾರದಲ್ಲಿ ಆಯೋಗ ನಿಗದಿ ಪಡಿಸಿದ 12 ದಾಖಲೆ ಗಳಲ್ಲಿ ನಿಗದಿತ ದಾಖಲೆ ಒದಗಿಸಬೇಕು.
*ಮತದಾರ 1987ರ ಜು.1ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದ್ದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ಯಾವುದೇ ದಾಖಲೆ.
*ಮತದಾರ 1987ರ ಜು.1ರಿಂದ 2004ರ ಡಿ.2ರ ನಡುವೆ ಭಾರತದಲ್ಲಿ ಜನಿಸಿದ್ದರೆ ಜನ್ಮದಿನಾಂಕ ಅಥವಾ ಜನ್ಮಸ್ಥಳದ ದಾಖಲೆಯೊಂದಿಗೆ ತಂದೆ ಅಥವಾ ತಾಯಿಗೆ ಸಂಬಂಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳದ ದಾಖಲೆ ಒದಗಿಸಬೇಕು.
*ಮತದಾರ 2004ರ ಡಿ.2ರ ಬಳಿಕ ಭಾರತದಲ್ಲಿ ಜನಿಸಿದರೆ ತಂದೆ ಹಾಗೂ ತಾಯಿಗೆ ಸಂಬಂಧಿಸಿದ ಜನ್ಮ ದಿನಾಂಕ ಅಥವಾ ಜನ್ಮಸ್ಥಳದ ದಾಖಲೆ ಒದಗಿಸಬೇಕಾಗಿದೆ.
ಎಸ್‌ಐಆರ್ ಈಗಾಗಲೇ ನಡೆದ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯ ಮತದಾರರು ಮತದ ಹಕ್ಕು ಕಳೆದುಕೊಳ್ಳಲು ಕಾರಣ ಕೇಳಿದಾಗ, ಬಿಹಾರದಲ್ಲಿ ಎಸ್‌ಐಆರ್ ಪೂರ್ವ ಪ್ರಕ್ರಿಯೆ ನಡೆಯಲಿಲ್ಲ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಯಾದ ಕಾರಣ ಈ ಪ್ರಕ್ರಿಯೆಗೆ ಕಾಲಾವಕಾಶ ಸಿಗಲಿಲ್ಲ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಉಪಸ್ಥಿತರಿದ್ದರು.
ಎಸ್‌ಐಆರ್ ವೇಳಾಪಟ್ಟಿ
ಆಯೋಗದ ಕಾರ್ಯಕ್ರಮ ವೇಳಾಪಟ್ಟಿಯಂತೆ ಜೂನ್ 20ರಿಂದ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಜೂ.20ರಿಂದ 29ರವರೆಗೆ ಪೂರ್ವ ತಯಾರಿ, ಬಿಎಲ್‌ಒಗಳಿಗೆ ತರಬೇತಿ ಹಾಗೂ ಅರ್ಜಿಗಳ ಮುದ್ರಣ ನಡೆಯಲಿದೆ. ಜೂ.30ರಿಂದ ಜು.29ರವರೆಗೆ ಆಯಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ತಮ್ಮ ವ್ಯಾಪ್ತಿಯ ಮತದಾರರ ಮನೆ-ಮನೆಗೆ ಭೇಟಿ ನೀಡಿ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆಯನ್ನು (ಪ್ರಿ ಪಿಲ್ಡ್ ಇನ್ಯೂಮರೇಷನ್ ಫಾರ್ಮ್) ಪ್ರತಿಯೊಬ್ಬ ಮತದಾರರಿಗೆ ದ್ವಿಪ್ರತಿಯಲ್ಲಿ ವಿತರಿಸಲಿದ್ದಾರೆ ಎಂದರು.
ಜು.29ರಂದು ಮತಗಟ್ಟೆಗಳ ಪುನರ್ ವಿಂಗಡನೆ ನಡೆಯಲಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಬಳಿಕ ಆ.5ರಿಂದ ಸೆಪ್ಟಂಬರ್ 4ರವರೆಗೆ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜೊತೆಜೊತೆಗೆ ಆ.5ರಿಂದ ಅಕ್ಟೋಬರ್ 3ರವರೆಗೆ ನೋಟೀಸು ನೀಡಿ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುತ್ತದೆ ಹಾಗೂ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಸಲ್ಲಿಸಬಹುದಾದ 12 ದಾಖಲೆಗಳು
*ಯಾವುದೇ ಸರಕಾರ ನೀಡಿರುವ ಅಧಿಕೃತ ಗುರುತು ಚೀಟಿ, ಪೆನ್ಷನ್ ಪೇಮೆಂಟ್ ಆರ್ಡರ್
*ಸರಕಾರದ ಸ್ಥಳೀಯ ಅಧಿಕಾರಿಗಳು, ಬ್ಯಾಂಕ್, ಅಂಚೆಕಚೇರಿ, ಎಲ್‌ಐಸಿ, ಸಾರ್ವಜನಿಕ ಸಂಸ್ಥೆಗಳು ನೀಡಿರುವ ಗುರುತು ಚೀಟಿ
* ಅಧಿಕೃತವಾದ ಜನ್ಮ ದಿನಾಂಕದ ಸರ್ಟಿಫಿಕೇಟ್
*ಪಾಸ್‌ಪೋರ್ಟ್
*ಮಾನ್ಯತೆ ಪಡೆದ ಮಂಡಳಿ, ವಿವಿಗಳು ನೀಡಿದ ಎಸೆಸೆಲ್ಸಿ ಸರ್ಟಿಫಿಕೇಟ್
*ರಾಜ್ಯ ಸರಕಾರದ ಅಧಿಕೃತ ಸಂಸ್ಥೆ ನೀಡಿದ ಖಾಯಂ ನಿವಾಸಿ ಪತ್ರ
*ಅರಣ್ಯ ಹಕ್ಕು ಪತ್ರ,*ಅಧಿಕೃತ ಒಬಿಸಿ, ಎಸ್‌ಸಿ, ಎಸ್‌ಟಿ ಅಥವಾ ಇತರೆ ಯಾವುದೇ ಜಾತಿ ಸರ್ಟಿಫಿಕೇಟ್ *ಸರಕಾರಿ ಅಧಿಕಾರಿಗಳು ನಿರ್ವಹಿಸುವ ಕುಟುಂಬ ನೊಂದಣಿ ಪತ್ರ
*ಸರಕಾರ ನೀಡುವ ನಿವೇಶನ, ವಸತಿ ಹಕ್ಕುಪತ್ರ. ಆಧಾರ್ ಕೇವಲ ಗುರುತು ಪತ್ರವಾಗಿ ಪರಿಗಣಿಸಲ್ಪಡುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಶೇ.92.55 ಮ್ಯಾಪಿಂಗ್ ಪೂರ್ಣ
ಪ್ರಸ್ತುತ ಜಿಲ್ಲೆ ವಿಶೇಷ ಸಮಗ್ರ ಪರಿಷ್ಕರಣೆಗೆ ಪೂರ್ವಭಾವಿಯಾಗಿ ನಡೆಯುವ ಮ್ಯಾಪಿಂಗ್ ಪ್ರಕ್ರಿಯೆ ನಡೆದಿದ್ದು, ಈ ಕಾರ್ಯದಲ್ಲಿ ಜಿಲ್ಲೆಯು ಶೇ.92.55ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮ್ಯಾಪಿಂಗ್‌ನಲ್ಲಿ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿಯ ವಿವರಗಳನ್ನು ಜೋಡಣೆ ಮಾಡಲಾಗುತ್ತದೆ ಎಂದವರು ವಿವರಿಸಿದರು.
2025ರ ಮತದಾರರ ಪಟ್ಟಿಯಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,64,524 ಮತದಾರರಿದ್ದು, ಇವರಲ್ಲಿ ಇದುವರೆಗೆ 9,85,185 ಮಂದಿಯ ಮ್ಯಾಪಿಂಗ್ ಮುಗಿದಿದೆ. 79,339 ಮಂದಿ ಮ್ಯಾಪಿಂಗ್‌ಗೆ ಬಾಕಿ ಉಳಿದಿದ್ದಾರೆ. ಇವರಲ್ಲಿ 56,000ಕ್ಕೂ ಅಧಿಕ ಮಂದಿ ಹೊರಜಿಲ್ಲೆ ಹಾಗೂ ಹೊರ ರಾಜ್ಯದವರು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸ್ವರೂಪ ಟಿ.ಕೆ. ತಿಳಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 2,41,782 ಮತದಾರರಿರಿದ್ದು, ಇವರಲ್ಲಿ 2,24,942 ಮಂದಿಯ ಮ್ಯಾಪಿಂಗ್ (ಶೇ.93.04) ಪೂರ್ಣಗೊಂಡಿದೆ. ಇಲ್ಲಿ 16,840 ಮಂದಿಯ ಮ್ಯಾಪಿಂಗ್ ಬಾಕಿ ಇದೆ. ಉಳಿದಂತೆ
*ಕುಂದಾಪುರ: 2,12,551- 1,98,451- ಶೇ.93.37- 14,100
*ಉಡುಪಿ: 2,21,986- 1,94,403- ಶೇ.87.57- 27,583
*ಕಾಪು: 1,94,706- 1,81,677- ಶೇ.93.31- 13,029
*ಕಾರ್ಕಳ: 1,93,499- 1,85,712- ಶೇ.95.98- 7,787
*ಜಿಲ್ಲೆ: 10,64,524- 9,85,185- ಶೇ.92.55- 79,339.






