ಉಡುಪಿ: 483 ಶಾಲಾ ವಾಹನಗಳ ವಿಶೇಷ ತಪಾಸಣೆ

ಉಡುಪಿ: ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪರಿಣಾಮಕಾರಿ ಅನುಷ್ಠಾನದ ಹಿತದೃಷ್ಟಿ ಯಿಂದ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಲಾ ವಾಹನಗಳ ವಿಶೇಷ ಕಾರ್ಯಾಚರಣೆಯನ್ನು ಮಂಗಳವಾರ ನಡೆಸಲಾಯಿತು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಜು.4ರಂದು ಉಡುಪಿ ಜಿಲ್ಲಾಧಿಕಾರಿರವರ ಕಚೇರಿಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದು, ಅದರಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 483 ಶಾಲಾ ವಾಹನ, ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವ ಮತ್ತು ಶಾಲೆಯಿಂದ ಮನೆಗೆ ಸಾಗಿಸುವ ವಾಹನಗಳ ವಿಶೇಷ ತಪಾಸಣೆ ನಡೆಸಿದ್ದು, ಇದರಲ್ಲಿ ನಿಯಮ ಉಲ್ಲಂಘಿಸಿದ ಬಗ್ಗೆ 203 ಪ್ರಕರಣಗಳನ್ನು ದಾಖಲಿಸಿ, ಒಟ್ಟು 71,000ರೂ. ದಂಡ ವಸೂಲಿ ಮಾಡಲಾಗಿದೆ. ಪ್ರಕರಣಗಳ ಪೈಕಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳ ಸಾಗಾಟ- 112, ಸಮವಸ್ತ್ರ ಇಲ್ಲದೆ ವಾಹನ ಚಾಲನೆ 58 ಹಾಗೂ ಇತರ ಉಲ್ಲಂಘನೆಯ 33 ಪ್ರಕರಣಗಳು ವರದಿಯಾಗಿವೆ.
ಕಾರ್ಯಾಚರಣೆಯಲ್ಲಿ ಶಾಲಾ ಬಸ್‌ಗಳು, ವ್ಯಾನ್‌ಗಳು, ಆಟೋ ರಿಕ್ಷಾಗಳು ಹಾಗೂ ಇತರೆ ಶಾಲಾ ಮಕ್ಕಳ ಸಾರಿಗೆ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಪರವಾನಗಿ, ಶಾಲಾ ವಾಹನಗಳಿಗೆ ಕಡ್ಡಾಯ ವಾಗಿರುವ ಸುರಕ್ಷತಾ ಮಾನದಂಡಗಳು, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ವಾಹನಗಳಲ್ಲಿ ನಿಗದಿತ ಸಂಖ್ಯೆಗೆ ಮೀರಿದ ಮಕ್ಕಳನ್ನು ಸಾಗಿಸುತ್ತಿರುವ ಕುರಿತು ಪರಿಶೀಲನೆ ನಡೆಸಲಾಯಿತು.
ತಪಾಸಣೆಯ ವೇಳೆ ಸಂಚಾರ ನಿಯಮಗಳು ಹಾಗೂ ಶಾಲಾ ವಾಹನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ರುವ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಸೂಕ್ತ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಅಲ್ಲದೆ ಸಂಬಂಧಿತ ವಾಹನ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಶಾಲಾ ಮಕ್ಕಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಯಿತು.
ಶಾಲಾ ಮಕ್ಕಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವಾಹನಗಳಲ್ಲಿ ಅತಿಯಾದ ಮಕ್ಕಳ ಸಾಗಾಟ, ದಾಖಲೆಗಳ ಕೊರತೆ, ಸುರಕ್ಷತಾ ಸಾಧನಗಳ ಅಭಾವ ಹಾಗೂ ಇತರೆ ನಿಯಮ ಉಲ್ಲಂಘನೆ ಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿಯೂ ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.






