ಉಡುಪಿ | ವಿದ್ಯಾರ್ಥಿಗಳು ಸಂವಿಧಾನದ ಮೂಲ ಆಶಯಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಿ : ಪ್ರತೀಕ್ ಬಾಯಲ್

ಉಡುಪಿ, ನ.26: ನಮ್ಮ ವಿದ್ಯಾರ್ಥಿಗಳು ಸಂವಿಧಾನದ ಮೂಲ ಆಶಯ, ಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ಶಿಲ್ಪಿಗಳು ಸಂವಿಧಾನದ ಸ್ವರೂಪವನ್ನು ಬಹಳ ಸ್ಪಷ್ಟತೆ ಮತ್ತು ವೈಜ್ಞಾನಿಕತೆಯಿಂದ ರಚಿಸಿದ್ದಾರೆ. ಸಂವಿಧಾನ ಎಂದರೆ ಕೇವಲ ಪೀಠಿಕೆ ಅಲ್ಲ. ದೇಶದ ಭೌಗೋಳಿಕ ಸನ್ನಿವೇಶ, ಹೆಸರು, ನಾಗರಿಕರು ಹೊಂದಿರುವ ಹಕ್ಕು ಮತ್ತು ಕರ್ತವ್ಯಗಳು, ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯಗಳನ್ನು ಸಂವಿಧಾನದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ದೇಶದ ನಾಗರಿಕರೆಲ್ಲರೂ ಸಂವಿಧಾನವನ್ನು ಓದಿ, ಗೌರವಿಸಿ, ರಕ್ಷಿಸಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಗಳ ಆಶ್ರಯದಲ್ಲಿ ನಗರದ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ನಡೆದ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಮೂಲ ತತ್ವಗಳನ್ನು ಅತ್ಯಂತ ಸರಳವಾಗಿ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಕವಿತೆಯ ರೂಪದಲ್ಲಿರುವ ‘ಭಾರತದ ಸಂವಿಧಾನದ ಮೂಲ ಆಶಯಗಳು’ ಎನ್ನುವ ಪುಸ್ತಕವನ್ನು ಹೊರತರಲಾಗಿದೆ ಎಂದು ಈ ಸಂದರ್ಭದಲ್ಲಿ ಬಿಡುಗಡೆಗೊಂಡ ಪುಸ್ತಕದ ಕುರಿತು ಅವರು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರಜೆಗಳು ಪ್ರಭುಗಳಾಗುವ ಅದ್ಭುತ ಕಲ್ಪನೆಯೊಂದಿಗೆ ನಮ್ಮ ಹಿರಿಯರು ಸಂವಿಧಾನವನ್ನು ರಚಿಸಿ, ಅಂಗೀಕರಿಸಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿರ್ದೇಶಿಸಿರುವ ಜಗತ್ತಿನ ಅತಿ ದೊಡ್ಡ ಸಂವಿಧಾನ ನಮ್ಮದು ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಡಾ.ಅಂಬೇಡ್ಕರ್ ಅವರ ದೂರದರ್ಶಿತ್ವ, ಅವರ ಚಿಂತನೆಗಳನ್ನು ಮನನ ಮಾಡಿಕೊಂಡು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದ ಅವರು, ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ನ.26ಮಹತ್ವ ದಿನವಾಗಿದೆ. 1949ರ ನ.26ರಂದು ಸಂವಿಧಾನ ಸಭೆಯು ಭಾರತೀಯ ಸಂವಿಧಾನವನ್ನು ಅಂಗೀಕರಿಸಿತ್ತು. ಮುಂದೆ 1950ರ ಜನವರಿ 26ರಂದು ಅದು ಜಾರಿಗೆ ಬಂದು ನಮ್ಮ ದೇಶ ಗಣರಾಜ್ಯವಾಯಿತು ಎಂದರು.
ಸಂವಿಧಾನದ ಆಶಯಗಳಿಗೆ ಬದ್ದವಾಗಿ ದೇಶವು ಅಭಿವೃದ್ದಿ ಹೊಂದುತ್ತಿದ್ದು, ವಿಶ್ವವು ಭಾರತದತ್ತ ತಿರುಗಿ ನೋಡುತ್ತಿದೆ. ಸಂವಿಧಾನದ ಆಶಯದಂತೆ ದೇಶದಲ್ಲಿ ಸಮಾನತೆಯ ಸಮಾಜ ರೂಪುಗೊಂಡಾಗ ಅಭಿವೃದ್ದಿಗೆ ನಿಜವಾದ ಅರ್ಥ ಬರುತ್ತದೆ ಎಂದು ಯಶಪಾಲ್ ಸುವರ್ಣ ನುಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಭಾರತದ ಸಂವಿಧಾನದ ಮೂಲ ಆಶಯಗಳು ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೇ ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಉಡುಪಿ ಬೋರ್ಡ್ ಹೈಸ್ಕೂಲಿನಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದವರೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಕಪ್ಪ ಆರ್ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







