ಉಡುಪಿ | ವಿದ್ಯಾರ್ಥಿಗಳಿಗೆ ಭಾಷಾ ಸಂವಹನವನ್ನು ಕಲಿಸಿ : ವಸಂತ ಭಾರದ್ವಾಜ್

ಉಡುಪಿ, ನ.29: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸರಿಯಾದ ಭಾಷಾ ಸಂವಹನವನ್ನು ಕಲಿಸದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಕವಿ, ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಡಾ.ಯು.ಪಿ.ಉಪಾಧ್ಯಾಯ ಹಾಗೂ ಡಾ.ಸುಶೀಲಾ ಉಪಾಧ್ಯಾಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸೃಜನಶೀಲ ಅಲೋಚನೆ, ಇಚ್ಛಾಶಕ್ತಿಯಿಂದ ಮಾತ್ರ ಆಂಗ್ಲ ಪದಗಳಿಗೆ ಪರ್ಯಾಯ ಕನ್ನಡ ಪದ ಹಾಗೂ ಹೊಸ ಪದಗಳ ಸೃಷ್ಟಿಯಾಗಲು ಸಾಧ್ಯ. ಇದರೊಂದಿಗೆ ಆಡಳಿತ ಪದಕೋಶ ನಿರ್ಮಾಣವಾಗಬೇಕು. ಶಬ್ದದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದವರು ಹೇಳಿದರು.
ಸಂಶೋಧನೆ ಹಾಗೂ ಪಿಎಚ್ಡಿ ಅಧ್ಯಯನದ ಕುರಿತು ಮಾತನಾಡಿದ ಡಾ.ವಸಂತ ಭಾರದ್ವಾಜ್, ಕರಾವಳಿ ಕರ್ನಾಟಕದ ಯಕ್ಷಗಾನ ವಿಷಯವಾಗಿ 60 ಪಿಎಚ್ಡಿ ಅಧ್ಯಯನ ನಡೆದಿವೆ. ಅದೇ ರೀತಿ ರಾಜ್ಯದ ವಿವಿಧ ವಿವಿಗಳಲ್ಲಿ ದಾಸ ಸಾಹಿತ್ಯದ ಕುರಿತು 100 ಪಿಎಚ್ಡಿಗಳು ಬಂದಿವೆ. ಆದರೆ ದಾಸ ಸಾಹಿತ್ಯ ಕುರಿತು ಮಂಗಳೂರು ವಿವಿಯಲ್ಲಿ ಒಂದೇ ಒಂದು ಪಿಎಚ್ಡಿ ಬಂದಿಲ್ಲ ಎಂದವರು ಹೇಳಿದರು.
ನಮ್ಮಲ್ಲಿ ಸಂಶೋಧನೆಗೆ ವಿಪುಲ ಸಾಮಗ್ರಿ, ಅವಕಾಶಗಳಿದ್ದು ಯುವ ಮನಸ್ಸುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಪಸ್ಸಿನ ರೀತಿಯಲ್ಲಿ ಸಂಶೋಧನೆ ನಡೆಯಬೇಕು ಎಂದೂ ಕರ್ನಾಟಕ ರಾಜ್ಯೋತ್ಸವ ಪಡೆದಿರುವ ಡಾ.ಭಾರರದ್ವಾಜ್ ತಿಳಿಸಿದರು.
ವಿದ್ವಾಂಸ, ನಿಘಂಟು ತಜ್ಞ ಡಾ. ಪದ್ಮನಾಭ ಕೇಕುಣ್ಣಾಯ ಅಭಿನಂದನಾ ಮಾತುಗಳನ್ನಾಡಿದರು. ಹಿರಿಯ ವಿದ್ವಾಂಸ ಹಾಗೂ ಜರ್ಮನ್ ಭಾಷಾ ತಜ್ಞ ಡಾ.ಎನ್.ಟಿ.ಭಟ್ ಪ್ರಶಸ್ತಿ ಪ್ರದಾನ ಮಾಡಿದರು. ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಎಸ್.ಆರ್.ಅರುಣ್ಕುಮಾರ್ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







