ಉಡುಪಿ| ಸಿಎಂ ಭರವಸೆ ಹಿನ್ನೆಲೆಯಲ್ಲಿ ಕೊರಗರ ಅಹೋರಾತ್ರಿ ಧರಣಿ ಅಂತ್ಯ: 3 ತಿಂಗಳೊಳಗೆ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆ

ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗ ಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಕಳೆದ 26 ದಿನ ಗಳಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷೆ ಸುಶೀಲಾ ನಾಡ ಈ ವಿಷಯವನ್ನು ಪ್ರಕಟಿಸಿದರು. ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗ ಗಳಲ್ಲಿ ನೇರ ನೇಮಕಾತಿ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸಲು ಸಮಯಾವಕಾಶ ಕೇಳಿದ್ದು, ಅದರಂತೆ ಮೂರು ತಿಂಗಳೊಳಗೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
26 ದಿನಗಳ ಹೋರಾಟ: ಅಳಿವಿನಂಚಿನಲ್ಲಿರುವ ಕೊರಗ ಸಮುದಾಯ ವನ್ನು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯ (ಪಿವಿಟಿಜಿ) ಎಂಬುದಾಗಿ ಗುರುತಿಸ ಲಾಗಿದ್ದು, ನಮ್ಮ ಸಮುದಾಯದವರು ಎಲ್ಲ ರೀತಿಯ ಅವಕಾಶ ಗಳಿಂದ ವಂಚಿತರಾಗಿದ್ದಾರೆ. ಅಜಲು ಅಸ್ಪಶ್ಯತೆ ಕಾರಣದಿಂದಾಗಿ ಜನಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖ ವಾಗುತ್ತಿದ್ದು, ಸಂಘಟನೆಯ ಪರಿಶ್ರಮದಿಂದ ಇಂದು ಸಮುದಾಯ ಶಿಕ್ಷಣದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದೆ ಎಂದು ಸುಶೀಲಾ ನಾಡ ತಿಳಿಸಿದರು.
ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ ಪದವಿ, ಕಾನೂನು ಪದವಿ ವಿವಿಧ ವೃತ್ತಿಪರ ಶಿಕ್ಷಣಗಳನ್ನು ಈ ಸಮುದಾಯದ ಯುವ ಜನತೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇವರಿಗೆ ಸರಕಾರದ ಯಾವುದೇ ಹುದ್ದೆಗಳು ದೊರೆಯದ ಹಿನ್ನೆಲೆಯಲ್ಲಿ ಡಿ.15ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹವನ್ನು ಸಂಘಟನೆ ಆರಂಭಿಸಿತು.
26 ದಿನಗಳ ಕಾಲ ನಡೆದ ಧರಣಿ ಸ್ಥಳಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಮುಸ್ಲಿಮ್ ಒಕ್ಕೂಟ, ದಸಂಸ, ಅಲ್ಪಸಂಖ್ಯಾತರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ನಿಯೋಗಗಳು ಆಗಮಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿತು.
ಮುಖ್ಯಮಂತ್ರಿ ಭೇಟಿ: ಜ.8ರಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಮುದಾಯದ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಬೇಡಿಕೆಯ ಮನವಿಯನ್ನು ಸಲ್ಲಿಸಿತು. ಮುಖ್ಯ ಮಂತ್ರಿಯವರು ಇದಕ್ಕೆ ಸಕರಾತ್ಮವಾಗಿ ಸ್ಪಂದಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಜರಿದ್ದರು. ಅದೇ ರೀತಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬುಡಕಟ್ಟು ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಂ.ಕನಗವಲ್ಲಿ, ಬುಡಕಟ್ಟು ನಿರ್ದೇಶಕ ಯೋಗೀಶ್ ಕೆ. ಅವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗ ಸಮುದಾಯದ 2000 ಮಂದಿ ವಿದ್ಯಾವಂತ ಯವಜನರಿದ್ದು, ಇವರಿಗೆ ಸರಕಾರದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳಿಗೆ ನೇರನೇಮಕಾತಿ ಮೂಲಕ ಸರಕಾರಿ ಉದ್ಯೋಗ ನೀಡು ವಂತೆ ಮುಖ್ಯಮಂತ್ರಿ ಸಹಿತ ಅಧಿಕಾರಿಗಳಿಗೆ ಮನವಿ ಮಾಡಿಕೊಡಲಾಯಿತು. ಇದಕ್ಕೆ ಅವರಿಂದ ಸೂಕ್ತ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನವೀನ್ ಬಂಟ್ವಾಳ, ಸಂಯೋಜಕ ಪುತ್ರನ್ ಹೆಬ್ರಿ, ಪ್ರಮುಖ ರಾದ ನಾಗು ನಾಡ, ಭಾರತಿ ಕಾಪು, ಶೀಲಾ ಬೆಳ್ಮಣ್, ಶೇಖರ್ ಕೆಂಜೂರು, ದಿನಕರ್ ಕಳ್ತೂರು, ಪ್ರೀತಿ ಹೆಬ್ರಿ, ಸುರೇಶ್ ಕಾಪು, ಸಂಜೀವ ಬಾರಕೂರು, ಅಮ್ಮಣ್ಣಿ ಚೋರಾಡಿ, ಪ್ರವೀಣ್ ಹೆಬ್ರಿ, ಕುಮಾರ್‌ದಾಸ್ ಹಾಲಾಡಿ ಉಪಸ್ಥಿತರಿದ್ದರು.
24 ದಿನಗಳು ಭಾಗಿಯಾದ ನಾಗು ನಾಡ!
ಈ ಹೋರಾಟ ನಡೆದಿರುವುದು ಯುವಜನತೆಯ ಉದ್ಯೋಗಕ್ಕಾಗಿ. ಆದರೆ ಇಲ್ಲೊಬ್ಬರು 70ರ ಹರೆಯದ ವೃದ್ಧೆ ಅಹೋರಾತ್ರಿ ನಿರಂತರ 25ದಿನಗಳ ಕಾಲದ ನಡೆದ ಈ ಹೋರಾಟದಲ್ಲಿ 24 ದಿನಗಳ ಕಾಲವೂ ಭಾಗವಹಿಸಿ ತನ್ನ ಸಮುದಾಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿರುವ ಬೈಂದೂರು ತಾಲೂಕಿನ ನಾಡ ಗ್ರಾಮದ ನಾಗು, ತಮ್ಮ ಸಮುದಾಯದ ಯುವ ಜನತೆಗೆ ಒಳಿತಾಗಲಿ ಎಂಬ ಆಶಯ ದೊಂದಿಗೆ 24 ದಿನಗಳ ಕಾಲ ರಾತ್ರಿ ಹಗಲು ಧರಣಿ ಸ್ಥಳದಲ್ಲಿಯೇ ಉಳಿದು ಕೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಮಕ್ಕಳಿಗೆ ಏನಾದರೂ ಒಳ್ಳೆಯದಾಗಲಿ ಎಂಬ ಉದ್ದೇಶ ದಿಂದ ಮನೆ ಬಿಟ್ಟು ಬಂದು ಈ ಹೋರಾಟದಲ್ಲಿ ಭಾಗಿಯಾ ಗಿದ್ದೇನೆ’ ಎಂದು ಬಾವುಕರಾಗಿ ನುಡಿದರು.







