ಉಡುಪಿ | ದೇಶ ಕಟ್ಟಿದವರ ಬಗ್ಗೆ ಅರಿಯುವ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ: ಸುಧಾಕರ ದೇವಾಡಿಗ

ಉಡುಪಿ, ನ.24: ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿರುತ್ತೇವೆ. ಹಾಗಾಗಿ ದೇಶದ ಸ್ವತಂತ್ರ ಚಳವಳಿಗಳಲ್ಲಿ ಭಾಗವಹಿಸಿ ದೇಶ ಕಟ್ಟಿದ ಗಾಂಧಿ, ನೆಹರೂ, ವಲ್ಲಭಬಾಯಿ ಪಟೇಲ್, ಶುಭಾಸ್ ಚಂದ್ರ ಬೋಸ್ ಇವರ ಬಗ್ಗೆ ನಾವು ತಿಳಿದು ಕೊಳ್ಳಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾರ್ಕ ದೇವಾಡಿಗ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಜರಗಿದ ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಪ್ರಥಮ ಪ್ರಧಾನಿಯಾದ ನೆಹರೂರವರು ಪ್ರಧಾನಿಯಾಗಿ ಈ ದೇಶದ ಆಡಳಿತವನ್ನು ಕೈಗೆತ್ತಿಕೊಂಡಾಗ ಈ ದೇಶ ಬಡತನದಿಂದ ಕೂಡಿತ್ತು. ದೇಶದಲ್ಲಿ ನಿರಾಶ್ರಿತರ ಸಮಸ್ಯೆ ನಿರುದ್ಯೋಗದ ಸಮಸ್ಯೆ ತಾಂಡವ ಮಾಡುತ್ತಿತ್ತು. ಪಂಚವಾರ್ಷಿಕ ಯೋಜನೆಯ ಮೂಲಕ ದೇಶದಲ್ಲಿ ಕೈಗಾರಿಕೆ ಮತ್ತು ಕೃಷಿಗೆ ಪ್ರಾಧಾನ್ಯತೆ ಕೊಟ್ಟು ನೆಹರೂರವರು ದೇಶವನ್ನು ಕಟ್ಟಿದರು. ಹುಟ್ಟಿನಿಂದಲೇ ಅಗರ್ಭ ಶ್ರೀಮಂತರಾದ ನೆಹರೂರವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕೈಗೊಂಡ ಯೋಜನೆಗಳು ಸಮ ಸಮಾಜದ ಕನಸು ಸಾಕಾರಗೊಳಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದವು ಎಂದರು.
ನೆಹರೂರವರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮತ್ತು ಇವತ್ತಿನ ಯುವ ತಲೆಮಾರಿಗೆ ಸರಿಯಾಗಿ ಅರ್ಥ ಮಾಡಿಸದೆ ದೇಶ ಕಟ್ಟಿದ ಮಹನೀಯರನ್ನು ಅವಮಾನಿಸಲಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಮಾಡುತ್ತಿರುವ ಈ ತಪ್ಪನ್ನು ಯುವ ಜನರು ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಬಿಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನಿ ಸಿಂತಿಯಾ ಪಿರೇರ ಮಾತನಾಡಿದರು. ಕೋಶಾಧಿಕಾರಿ ಸತೀಶ್ ಡಿ.ಸಾಲಿಯಾನ್ ಉಪಸ್ಥಿತರಿದ್ದರು
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್ ಮತ್ತು ತಿಲಕ್‌ರಾಜ್ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.







