ಉಡುಪಿ | ನ.23ರಿಂದ ರಂಗಭೂಮಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ

ಉಡುಪಿ, ನ.22: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ವತಿಯಿಂದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನ.23ರಿಂದ ಡಿ.4ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.23ರಂದು ಸಂಜೆ 5 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ. ವಿ.ನಾಗರಾಜ ಮೂರ್ತಿ, ಉದ್ಯಮಿಗಳಾದ ರಂಜನ್, ಸತ್ಯಾನಂದ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ವನಿತಾ ಮಯ್ಯ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ರಂಗಭೂಮಿಯ ಕಲಾವಿದರಿಂದ ಗೀತಂ ಗಿರೀಶ್ ನೇತೃತ್ವದಲ್ಲಿ ’ಸಂಗೀತ ಸೌರಭ’ ಕಾಠ್ಯಕ್ರಮ ಸಭಾ ಕಾರ್ಯಕ್ರಮದ ಮೊದಲು ಸಂಜೆ 4 ಗಂಟೆಗೆ ನಡೆಯಲಿದೆ ಎಂದರು.
ಡಾ.ಟಿಎಂಎ ಪೈ, ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ ಸ್ಮಾರಕ ನಡೆಯುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಅತ್ಯುತ್ತಮ 12 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ 6, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ತಲಾ 2 ಮತ್ತು ತುಮಕೂರು ಹಾಗೂ ಮೈಸೂರು ಜಿಲ್ಲೆಯ ತಲಾ 1 ತಂಡ ಭಾಗವಹಿಸಲಿವೆ.
ಒಟ್ಟು 12 ದಿನಗಳಲ್ಲಿ 12 ನಾಟಕಗಳು ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ಬಾರಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ 35,000 ರೂ., ದ್ವಿತೀಯ ಸ್ಥಾನಿಗೆ 25,000 ರೂ. ಹಾಗೂ ತೃತೀಯ ಸ್ಥಾನಿಗೆ 15,000 ರೂ. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾಧನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡಗಳಿಗೆ ನಗದು ಸಹಿತ ಪುರಸ್ಕಾರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ವಿವೇಕಾನಂದ ಎನ್., ಯು. ಭೋಜ ಉಪಸ್ಥಿತರಿದ್ದರು.
ಪ್ರದರ್ಶನಗೊಳ್ಳುವ ನಾಟಕಗಳು
ನ.23ರಂದು ಗುಬ್ಬಿವೀರಣ್ಣ ಶಿಕ್ಷಣ ಕಲಾತಂಡ ತುಮಕೂರು ಇವರಿಂದ ಗೌತಮ ಬುದ್ಧ (ನಿರ್ದೇಶನ: ಭಾನುಪ್ರಕಾಶ್ ಎಸ್.ವಿ.), ನ.24ರಂದು ಅಂತರಂಗ - ಬಹಿರಂಗ ಬೆಂಗಳೂರು ತಂಡದಿಂದ ‘ಅನುಗ್ರಹ’ (ಭಾಷ್ ರಾಘವೇಂದ್ರ), ನ.25ರಂದು ಪುನಃ ಥಿಯೇಟರ್ ಉಡುಪಿಯಿಂದ ‘ಯೋಗಿ ಮತ್ತು ಭೋಗಿ’ (ಮಹೇಶ್ ದತ್ತಾನಿ), ನ.26ರಂದು ಮೈಸೂರಿನ ನೇಪಥ್ಯ ರಂಗತಂಡದಿಂದ ‘ಒಡಲಾಳ’ (ಸಾಗರ್ ಗುಂಬಳ್ಳಿ),ನ.27ರಂದು ಸುಮನಸಾ ಕೊಡವೂರು ಉಡುಪಿ ತಂಡದಿಂದ ‘ಈದಿ’(ವಿದ್ದು ಉಚ್ಚಿಲ), ನ.28ರಂದು ಬೆಂಗಳೂರಿನ ಸಂಚಯ ತಂಡದಿಂದ ‘ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? (ಚಿತ್ರಶೇಖರ್ ಎನ್.ಎಸ್.).
ನ.29ರಂದು ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದಿಂದ ‘ಶಿವೋಹಂ’ (ಗಣೇಶ್ ಮಂದಾರ್ತಿ), ನ.30ರಂದು ಬೆಂಗಳೂರಿನ ನಮ್ದೆ ನಟನೆ ತಂಡದಿಂದ ‘ಮಗಳೆಂಬ ಮಲ್ಲಿಗೆ’ (ರಾಜೇಂದ್ರ ಕಾರಂತ), ಡಿ.1ರಂದು ನೆನಪು ಕಲ್ಬರಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ‘ಮಾಯಾ ದ್ವೀಪ’ (ಪುನೀತ್ ಎ.ಎಸ್.), ಡಿ.2ರಂದು ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾತಂಡದಿಂದ ‘ಆ ಊರು ಈ ಊರು’ (ಹುಲುಗಪ್ಪ ಕಟ್ಟೀಮನಿ), ಡಿ.3ರಂದು ಸಾಗರದ ಸ್ಪಂದನ ತಂಡ ದಿಂದ ‘ಪ್ರಾಣಪದ್ಮಿನಿ’ (ಮಂಜುನಾಥ ಎಲ್.ಬಡಿಗೇರ), ಡಿ.4ರಂದು ಬೆಂಗಳೂರು ರೇವಾ ರಂಗ ಅಧ್ಯಯನ ತಂಡದಿಂದ ‘ದರ್ಶನಂ’ (ನಂದಕುಮಾರ್ ಅನ್ನಕ್ಕನವರ್) ನಾಟಕ ಪ್ರದರ್ಶನಗೊಳ್ಳಲಿವೆ.







