ಉಡುಪಿ | ನ.16ರಂದು ತುಳು ಕೋಟಿ ಗೀತಾ ಲೇಖನ ಸಮರ್ಪಣೆ
ಉಡುಪಿ, ನ.12: ಪರ್ಯಾಯ ಶ್ರೀಪುತ್ತಿಗೆ ಮಠ ಹಾಗೂ ಜೈ ತುಳುನಾಡು ಉಡುಪಿ ಘಟಕದ ವತಿಯಿಂದ ತುಳು ಲಿಪಿಯಲ್ಲಿ ಬರೆದ ಕೋಟಿ ಗೀತಾ ಲೇಖನ ಯಜ್ಞದ ಸಮರ್ಪಣೆ ನ.16ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ ಎಂದು ಇದರ ಕೋಟಿ ಗೀತಾ ಲೇಖನ ಯಜ್ಞದ ಪೂರ್ಣಾವಧಿ ಪ್ರಚಾರಕ ಕೆ.ವಿ.ರಮಣಾಚಾರ್ಯ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಪುತ್ರಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸುಮಾರು 200 ಮಂದಿ ಭಗವದ್ಗೀತೆ ಪುಸ್ತಕವನ್ನು ತುಳು ಲಿಪಿಯಲ್ಲಿ ಬರೆದಿದ್ದು, ಇದರ ಸಮರ್ಪಣೆ ನ.16ರಂದು ನಡೆಯಲಿದೆ. ಇನ್ನೂ 200ಕ್ಕೂ ಅಧಿಕ ಮಂದಿ ತುಳು ಲಿಪಿಯಲ್ಲಿ ಕೋಟಿಗೀತಾ ಲೇಖನ ಯಜ್ಞ ಬರೆಯುತ್ತಿದ್ದಾರೆ ಎಂದರು.
ನ.16ರಂದು ಬೆಳಗ್ಗೆ 9ಗಂಟೆಗೆ ಜೋಡುಕಟ್ಟೆಯಿಂದ ‘ತುಲುವೆರ್ ದಂಡ್’ ದಿಬ್ಬಣದ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಕೃಷ್ಣ ಮಠದ ಗೀತಾ ಮಂದಿರದ ಎದುರು ಕೊನೆಗೊಳ್ಳಲಿದೆ. ಮೆರವಣಿಗೆಯಲ್ಲಿ ತಂದ ತುಳು ಕೋಟಿಗೀತೆಯನ್ನು ಪುತ್ತಿಗೆ ಶ್ರೀಗಳಿಗೆ ಸಮರ್ಪಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೈತುಳುನಾಡು ಉಡುಪಿ ಅಧ್ಯಕ್ಷೆ ಸುಶೀಲಾ ಜಯಕರ, ಸಂಘಟನಾ ಕಾರ್ಯದರ್ಶಿ ಸಂತೋಷ್ ಕಟಪಾಡಿ, ಕೋಶಾಧಿಕಾರಿ ಸುಪ್ರಿಯಾ ಪುತ್ರನ್, ಉಪಾಧ್ಯಕ್ಷ ಕಿರಣ್ ಭಂಡಾರಿ ಉಪಸ್ಥಿತರಿದ್ದರು.







