ಉಡುಪಿ | ಎಲ್ಲ ಧರ್ಮಗಳನ್ನು ಅರಿತುಕೊಳ್ಳುವುದು ಅಗತ್ಯ: ಎಸ್ಪಿ ಹರಿರಾಮ್ ಶಂಕರ್

ಉಡುಪಿ, ಡಿ.13: ಎಲ್ಲಾ ಧರ್ಮಗಳ ಆಚರಣೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿಯ ಸಂದೇಶ ಸಾರಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.
ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಶನಿವಾರ ಉಡುಪಿ ಶೋಕಾ ಮಾತಾ ಇಗರ್ಜಿಯ ಹಾಲ್ನಲ್ಲಿ ಆಯೋಜಿಸ ಲಾದ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಲ್ಲಾ ಸಮುದಾಯದವರೂ ಜೊತೆಯಾಗಿ ಸೇರಿಕೊಂಡು ಆಚರಿಸುವ ಹಬ್ಬ ಕ್ರಿಸ್ಮಸ್ ಆಗಿದ್ದು, ಸಮಾಜದ ಏಕತೆಯನ್ನು ಗಟ್ಟಿಗೊಳಿಸುವುದು ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶವಾಗಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಧರ್ಮಕ್ಕೆ ಮಹತ್ವದ ಪಾತ್ರವಿದೆ. ಧರ್ಮ ಜನರನ್ನು ಧರ್ಮ, ಸಾಮಾಜಿಕ, ಆಧ್ಯಾತ್ಮಿಕವಾಗಿ ಪ್ರಭಾವಿತಗೊಳಿಸುತ್ತದೆ. ಪ್ರತಿಯೊಂದು ಧರ್ಮ ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುತ್ತದೆ ಈ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ಮಾತನಾಡಿ, ಕ್ರಿಸ್ಮಸ್ ಪ್ರೀತಿ, ಶಾಂತಿ ಹಾಗೂ ಸಾಮರಸ್ಯದ ಹಬ್ಬವಾಗಿದೆ. ನಾವೆಲ್ಲ ಶಾಂತಿಯ ಸಾಧನಗಳಾಗಬೇಕು. ಅಶಾಂತಿ, ದ್ವೇಷದ ವಾತಾವರಣ ಇರುವಲ್ಲಿ ಶಾಂತಿಯನ್ನು ನೆಲೆಸಲು ಶ್ರಮಿಸಬೇಕು. ಮಾಧ್ಯಮಗಳ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯ ಇದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಗೆ ಪ್ರತಿಯಾಗಿ ನಾವೆಲ್ಲ ಪ್ರೀತಿ ಹರಿಕಾರರಾಗಬೇಕು. ದ್ವೇಷವನ್ನು ಪ್ರೀತಿಯ ಮೂಲಕ ಸೋಲಿಸಬೇಕು. ಇದು ಇಂದಿನ ಅಗತ್ಯವಾಗಿದೆ. ಪ್ರೀತಿಯಿಂದ ಮನಸ್ಸು ಗೆಲ್ಲಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಭೂಲೋಕದಲ್ಲಿ ಶಾಂತಿಗಾಗಿ ಶ್ರಮಿಸಿದವರು ಭಾಗ್ಯವಂತರು ಎಂದು ಯೇಸು ಸ್ವಾಮಿ ಸಾರಿದ್ದರು ಅವರ ಸಂದೇಶದಂತೆ ಬದುಕಿ ಬಾಳಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಶುಭ ಹಾರೈಸಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂಂಸ್ಟೀವನ್ ಡಿಸೋಜ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್ ವಂದಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.







