ಉಡುಪಿ | ನ.11ರಂದು ಪಟೇಲ್ ಅವರ ನೆನಪಲ್ಲಿ ಏಕತಾ ನಡಿಗೆ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ನ.3: ಸರ್ದಾರ್ ವಲ್ಲಭಬಾಯಿ ಪಟೇಲ್‌ರ 150ನೇ ಜನ್ಮ ದಿನದ ಅಂಗವಾಗಿ ನ.11ರಂದು ಏಕತಾ ನಡಿಗೆ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಸ್ತುಬದ್ಧವಾಗಿ ಇದನ್ನು ಆಯೋಜಿಸುವಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮದ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಏಕತಾ ನಡಿಗೆ ಕಾರ್ಯಕ್ರಮ ನ.11ರಂದು ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಹುತಾತ್ಮರ ಯುದ್ಧ ಸ್ಮಾರಕದವರೆಗೆ ನಡೆಯಲಿದ್ದು, ಅಂದು ಬೆಳಗ್ಗೆ 7:30ಕ್ಕೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಏಕತಾ ನಡಿಗೆ ಜಾಥಾಗೆ ಚಾಲನೆ ನೀಡಲಾಗುವುದು. ಜಾಥಾ ಸಮಾರೋಪಗೊಳ್ಳುವ ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್‌ರ ಜೀವನ ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಏಕತಾ ನಡಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಎನ್ನೆಸ್ಸೆಸ್, ಎನ್‌ಸಿಸಿ ಸ್ವಯಂಸೇವಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಯುವಕ-ಯುವತಿ ಮಂಡಳಿಗಳು, ಮಾಜಿ ಸೈನಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾಲ್ನಡಿಗೆ ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದರು.
ಜಾಥಾ ಸಂದರ್ಭದಲ್ಲಿ ವಿವಿಧ ಕಲಾತಂಡಗಳು, ಎನ್‌ಸಿಸಿ ಅಥವಾ ಶಾಲಾ ಮಕ್ಕಳಿಂದ ಬ್ಯಾಂಡ್‌ಗಳನ್ನು ಆಯೋಜಿಸಿ ಜಾಥಾಕ್ಕೆ ಇನ್ನಷ್ಟು ಮೆರುಗು ನೀಡಬೇಕು. ಜಾಥಾ ಹಾದು ಹೋಗುವ ಮಾರ್ಗದುದ್ದಕ್ಕೂ ಸರ್ದಾರ್ ವಲ್ಲಬಾಯಿ ಪಟೇಲ್ ಬಗ್ಗೆ ಘೋಷವಾಕ್ಯಗಳನ್ನು ಕೂಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್‌ಕುಮಾರ್ ಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಡಿಹೆಚ್‌ಓ ಡಾ.ಬಸವರಾಜ್ ಹುಬ್ಬಳ್ಳಿ, ಕಾರ್ಯಕ್ರಮ ಸಂಯೋಜಕ ಉಲ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.







