ಉಡುಪಿ: ಭರತನಾಟ್ಯದಲ್ಲಿ ವಿದುಷಿ ದೀಕ್ಷಾ ವಿಶ್ವದಾಖಲೆ !

ಉಡುಪಿ, ಆ.30: ಕಳೆದ 9 ದಿನಗಳಿಂದ ಒಟ್ಟು 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿಸುವ ಮೂಲಕ ವಿದುಷಿ ದೀಕ್ಷಾ ವಿ. ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಮಣಿಪಾಲ ರತ್ನ ಸಂಜೀವ ಕಲಾ ಮಂಡಲದ ನೇತೃತ್ವದಲ್ಲಿ ಬ್ರಹ್ಮಾವರ ಆರೂರು ಗ್ರಾಮದ ವಿದುಷಿ ದೀಕ್ಷಾ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನಲ್ಲಿ ಆ.21ರಂದು ಮಧ್ಯಾಹ್ನ 3.30ಗಂಟೆಗೆ ಆರಂಭಿಸಿದ ಭರತ ನಾಟ್ಯವನ್ನು ಆ.30ರ ಮಧ್ಯಾಹ್ನ 3.30ಕ್ಕೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿ ಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದರು. ಇದೀಗ ದೀಕ್ಷಾ ಈ ದಾಖಲೆಯನ್ನು ಮುರಿದು ಸಾಧನೆ ಮಾಡಿದ್ದಾರೆ.
ಪ್ರಮಾಣಪತ್ರ ಪ್ರದಾನ: ಶನಿವಾರ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ವಿಶ್ವದಾಖಲೆ ಬರೆದ ದೀಕ್ಷಾ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಮನೀಶ್ ಬಿಷ್ಣೋಯ್ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೀಕ್ಷಾ ಅವರನ್ನು ಅಭಿನಂದಿಸಿದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಭಕ್ತಿ ಇದ್ದಲ್ಲಿ ಭಗವಂತ ಇದ್ದರೆ ಶ್ರಮ ಇದ್ದಲ್ಲಿ ಫಲ ಇರುತ್ತದೆ. ಇವರ ಶ್ರಮದಿಂದ ಈ ದೊಡ್ಡ ಸಾಧನೆ ಸಾಧ್ಯವಾಗಿದೆ. ಹುಟ್ಟು ಅಕಸ್ಮಿಕ, ಸಾವು ನಿಶ್ಚಿತ ಇದರ ಮಧ್ಯೆ ನಾವು ಮಾಡಿರುವ ಸಾಧನೆ ಶಾಶ್ವತವಾಗಿರುತ್ತದೆ. ದೀಕ್ಷಾ ಮುಂದೆ ಇನ್ನಷ್ಟು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಪ್ರಸಾದ್‌ರಾಜ್ ಕಾಂಚನ್, ಜಯಪ್ರಕಾಶ್ ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ರಘುಪತಿ ಭಟ್, ವಿನಯ ಕುಮಾರ್ ಸೊರಕೆ, ಉದ್ಯಮಿ ಜಿ.ಶಂಕರ್, ಶಾಮಿಲಿ ಶಂಕರ್, ಬಿ.ಎನ್.ಶಂಕರ ಪೂಜಾರಿ, ಡಾ.ರೋಶನ್ ಕುಮಾರ್ ಶೆಟ್ಟಿ, ವಿದುಷಿ ಉಷಾ ಹೆಬ್ಬಾರ್, ಪ್ರೊ.ಸೋಜನ್, ಮೊದಲಾದವರು ಉಪಸ್ಥಿತರಿದ್ದರು.
ವಿದುಷಿ ದೀಕ್ಷಾ ಅವರ ತಂದೆ ವಿಠಲ್, ತಾಯಿ ಶುಭಾ, ಪತಿ ರಾಹುಲ್, ಗುರು ಶ್ರೀಧರ ಬನ್ನಂಜೆ ವೇದಿಕೆಯಲ್ಲಿದ್ದರು. ರತ್ನ ಸಂಜೀವ ಕಲಾ ಮಂಡಲದ ಅಧ್ಯಕ್ಷ ಮಹೇಶ್ ಠಾಕೂರು ಸ್ವಾಗತಿಸಿದರು. ಕಲಾವಿದ ಯಶವಂತ್ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







