ಉಡುಪಿ: ವಿದ್ಯಾಪೋಷಕ್ ಸನಿವಾಸ ಶಿಬಿರ ಸಮಾರೋಪ

ಉಡುಪಿ: ಯಕ್ಷಗಾನ ಕಲಾರಂಗ ಅಂತಿಮ ಪದವಿ ವಿದ್ಯಾರ್ಥಿ ಗಳಿಗೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಸನಿವಾಸ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಸಭಾಭವನದಲ್ಲಿ ಜರುಗಿತು.
ಸಮಾರೋಪ ಭಾಷಣ ಮಾಡಿದ ಹಿರಿಯ ಶಿಕ್ಷಣ ತಜ್ಞ ಪ್ರೊ. ಸಖಾರಾಮ ಸೋಮಯಾಜಿ ಮಾತನಾಡಿ, ಪದವಿ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳಿಗೆ ಉದ್ಯೋಗ ಪಡೆಯಲು ಅನುಕೂಲವಾಗುವ ಇಂತಹ ಸನಿವಾಸ ಶಿಬಿರ ಬಹಳ ಉಪಯುಕ್ತವಾದುದು. ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಮೂಲಕ ಪ್ರತಿಭಾವಂತ ಬಡ ದ್ಯಾರ್ಥಿಗಳಿಗೆ ಆರ್ಥಿಕ ಸಹಾಯದೊಂದಿಗೆ ಇಂತಹ ಶಿಬಿರಗಳನ್ನು ಏರ್ಪಡಿಸುತ್ತಾ, ಮಾರ್ಗದರ್ಶನ ನೀಡಿ ಅವರು ಸಮಾಜದಲ್ಲಿ ಗೌರವದ ಸ್ಥಾನ ಪಡೆಯಲು ಕಾರಣವಾಗಿದೆ ಎಂದರು.
ಶಿಬಿರದ ನಿರ್ದೇಶಕರಾದ ಪ್ರವೀಣ್ ಗುಡಿ ಮಾತನಾಡಿ, ಯಕ್ಷಗಾನ ಕಲಾರಂಗ ನನಗೆ ಮನೆಯಿದ್ದಂತೆ. ಸಂಸ್ಥೆಯ ಸದಸ್ಯರು ನೀಡುತ್ತಿರುವ ಪ್ರೀತಿ, ವಿಶ್ವಾಸ ಅನನ್ಯ. ಇಂತಹ ಶಿಬಿರಗಳನ್ನು ಹೆಚ್ಚು ಹೆಚ್ಚು ಮಾಡುತ್ತಾ ವಿದ್ಯಾರ್ಥಿ ಗಳಲ್ಲಿ ಕೌಶಲ್ಯಗಳನ್ನು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಗಳಿಸುವ ಶಕ್ತಿಯನ್ನು ಬೆಳೆಸೋಣ ಎಂದರು.
ವೇದಿಕೆಯಲ್ಲಿ ಯು. ವಿಶ್ವನಾಥ ಶೆಣೈ, ವಿಜಯಕುಮಾರ್ ಮುದ್ರಾಡಿ, ವಿಲಾಸಿನಿ ಬಿ. ಶೆಣೈ, ತಾರಾದೇವಿ, ವಿಷ್ಣುಮೂರ್ತಿ ಪ್ರಭು, ಭುವನಪ್ರಸಾದ ಹೆಗ್ಡೆ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳ ಪರವಾಗಿ ಧ್ರುವ ದೇವಾಡಿಗ, ನಾಗೇಂದ್ರ ಭಟ್, ಮಿಸ್ಬಾ ಕೌಸರ್, ನಿಶ್ಚ್ಚಿತ್, ಅಭಿಜ್ಞಾ ಹೆಗ್ಡೆ, ಹನುಮವ್ವ ತಮ್ಮ ಅನುಭವ ಹಂಚಿಕೊಂಡರು. ಶಿಬಿರದಲ್ಲಿ ರೆಸ್ಯೂಮ್ ಬರೆಯುವ, ಸಂದರ್ಶನ ಎದುರಿಸುವ, ಕೌಶಲ್ಯಗಳನ್ನು, ಮಾನೀಯ ಗುಣಗಳನ್ನು ಬೆಳೆಸಿಕೊಳ್ಳುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವ ಕುರಿತು ಶಿಬಿರದ ನಿರ್ದೇಶಕರು ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಉಪಯುಕ್ತ ಮಾರ್ಗದರ್ಶನ ನೀಡಿದರು.
82 ಮಂದಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಸಂಸ್ಥೆಯ ಸದಸ್ಯರಾದ ಮರ್ಣೆ ಉಮೇಶ್ ಭಟ್, ಅನಂತರಾಜ ಉಪಾಧ್ಯ, ಎನ್. ರಾಮ ಭಟ್, ಎ.ನಾಗಭೂಷಣ ಭಟ್ ಭಾಗವಹಿಸಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ವಿದ್ಯಾಪ್ರಸಾದ್ ಸಹಕರಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.






