ಉಡುಪಿ | ಕೊಡವೂರು ಬಳಿ ಬಾವಿ ಕುಸಿತ: ಮಣ್ಣು ಪಾಲಾಗಿದ್ದ ಕಾರ್ಮಿಕನ ಮೃತದೇಹ ಪತ್ತೆ

ರಮೇಶ್
ಉಡುಪಿ, ಮೇ 23: ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಎಂಬಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ನಿರ್ಮಾಣ ಹಂತದ ಬಾವಿ ಕುಸಿದು ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಕೊಪ್ಪಳ ಮೂಲದ ರಮೇಶ್ (25) ಅವರ ಮೃತದೇಹ ಮಧ್ಯರಾತ್ರಿ ವೇಳೆ ಪತ್ತೆಯಾಗಿದೆ.
ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಬಾವಿ ನಿರ್ಮಾಣ ಕೆಲಸಕ್ಕೆಂದು ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಎಂಬವರು ಕಾರ್ಕಳ ಬಸ್ ನಿಲ್ದಾಣದ ಬಳಿಯಿಂದ ಕೊಪ್ಪಳ ಜಿಲ್ಲೆಯ 5 ಜನ ಕೂಲಿ ಕಾರ್ಮಿಕರನ್ನು ಮೇ 21ರಂದು ಕರೆತಂದಿದ್ದರು.
ಕಾರ್ಮಿಕರು ಬಾವಿಯಿಂದ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಬಿಡುವ ವೇಳೆ ರಮೇಶ ಬಾವಿಯಲ್ಲಿ ಮಣ್ಣು ತೆಗೆಯುತ್ತಿರುವಾಗ ಬಾವಿಯ ದಂಡೆಯ ಮಣ್ಣು ಒಮ್ಮೆಲೆ ಕುಸಿದಿದ್ದು, ಇದರಿಂದ ರಮೇಶ ಅವರ ಮೈಮೇಲೆ ಮಣ್ಣು ಬಿದ್ದು, ಅವರು ಮಣ್ಣಿನಲ್ಲಿ ಹೂತು ಹೋದರೆನ್ನಲಾಗಿದೆ.
ಈ ವೇಳೆ ಬಾವಿಯಲ್ಲಿದ್ದ ಇನ್ನೋರ್ವ ಕಾರ್ಮಿಕ ಕೂಡಲೇ ಮೇಲೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಣ್ಣಿನಡಿ ಸಿಲುಕಿರುವ ಕಾರ್ಮಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದರು.
ಸುಮಾರು ಐದು ಅಡಿ ಆಳದಲ್ಲಿ ಸಿಲುಕಿರುವ ಕಾರ್ಮಿಕನ ಮೃತದೇಹ ಪತ್ತೆ ಕಾರ್ಯಚರಣೆಗೆ ಪದೇ ಪದೇ ಮಣ್ಣು ಕುಸಿಯುತ್ತಿರುವುದರಿಂದ ಅಡ್ಡಿಯಾಯಿತು. ಸತತ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಮಣ್ಣಿನ ಸಿಲುಕಿದ್ದ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಯಿತು.






