ಉಡುಪಿ | ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ಮಹಿಳೆಗೆ 31 ಲಕ್ಷ ರೂ. ವಂಚನೆ

ಉಡುಪಿ: ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ಮಹಿಳೆಯೊಬ್ಬರು ಹೂಡಿಕೆ ಮಾಡಿದ್ದ ಲಕ್ಷಾಂತರ ರೂ. ಹಣವನ್ನು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರದ ವಿಜಯಲಕ್ಷ್ಮೀ (55) ಎಂಬವರು ನ.29ರಂದು ಫೇಸ್‌ಬುಕ್ ನಲ್ಲಿ ವರ್ಕ್‌ಫ್ರಮ್ ಹೋಮ್ ಕುರಿತ ಜಾಹೀರಾತಿಗೆ ಕ್ಲಿಕ್ ಮಾಡಿದ್ದು, ಆಗ ವಿಜಯಲಕ್ಷ್ಮೀ ಅವರ ವಾಟ್ಸಾಪ್‌ಗೆ ಸಂದೇಶ ಬಂದಿತ್ತು. ತಾನು ಕಂಪೆನಿಯೊಂದರ ಎಚ್‌ಆರ್ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿ, ಪಾರ್ಟ್ ಟೈಮ್ ಕೆಲಸ ಮಾಡಲು ಆಸಕ್ತಿ ಇದ್ದರೆ ಫಾರ್ಮ್ ಪಿಲ್ ಮಾಡಿ ಕಳುಹಿಸಿ ಎಂಬುದಾಗಿ ಸಂದೇಶ ಕಳುಹಿಸಿದ್ದನು.
ಅದರ ನಂತರ ವಿವಿಧ ಲಿಂಕ್‌ಗಳನ್ನು ಕಳುಹಿಸಿದ್ದು, ಅದರಲ್ಲಿ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಟಾಸ್ಕ್ ಮಾಡಿರುವುದಕ್ಕೆ ಹಣವನ್ನು ಕೂಡ ಹಾಕಲಾಗಿತ್ತು. ಡಿ.1ರಂದು ಇನ್ನೊಂದು ಲಿಂಕ್ ಕಳುಹಿಸಿದ್ದು, ಅದನ್ನು ಒತ್ತಿದಾಗ ಟೆಲಿಗಾಮ್ ಖಾತೆ ಓಪನ್ ಆಗಿತ್ತು. ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ವಿಜಯಲಕ್ಷ್ಮೀ, ಆರೋಪಿತರು ತಿಳಿಸಿದಂತೆ ಡಿ.1ರಿಂದ ಡಿ.4ರವರೆಗೆ ಒಟ್ಟು 31,00,067ರೂ. ಹಣವನ್ನು ಪಾವತಿ ಮಾಡಿದ್ದರು. ಆದರೆ ಈವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಅದರ ಲಾಭಾಂಶವನ್ನಾಗಲೀ ನೀಡದೆ ವಂಚಿಸಲಾಗಿದೆ.







