ಉಡುಪಿ | ಡಿ.16ರಂದು ಮಹಿಳೆಯರ ಮೌನ ಮೆರವಣಿಗೆ, ಸಮಾವೇಶ

ಉಡುಪಿ, ಡಿ.13: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ, ಅಸಹಜ ಸಾವು ಹಾಗೂ ನಾಪತ್ತೆ ಪ್ರಕರಣಗಳ ಕುರಿತಂತೆ ಸಮರ್ಪಕ ರೀತಿಯ ತನಿಖೆ ನಡೆಸಿ, ಸತ್ಯವನ್ನು ಹೊರತರಲು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಇದೇ ಡಿ.16ರಂದು ಕೊಂದವರು ಯಾರು ಅಭಿಯಾನ ಬೆಳ್ತಂಗಡಿಯಲ್ಲಿ ಮಹಿಳಾ ಮೌನ ಮೆರವಣಿಗೆ ಹಾಗೂ ಬೆಳ್ತಂಗಡಿ ತಾಲೂಕು ಕಚೇರಿ ಆವರಣದಲ್ಲಿ ಮಹಿಳಾ ನ್ಯಾಯ ಸಮಾವೇಶವನ್ನು ಆಯೋಜಿಸಿದೆ ಎಂದು ಅಭಿಯಾನದ ಪ್ರಮುಖರಾದ ಜ್ಯೋತಿ ಎ. ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 20ಕ್ಕೂ ಅಧಿಕ ಮಹಿಳಾ ಸಂಘಟನೆಗಳು ಸೇರಿ ‘ಕೊಂದವರು ಯಾರು ?’ ಅಭಿಯಾನವನ್ನು ನಡೆಸುತಿದ್ದು, ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಮಹಿಳೆಯರ ಮೇಲೆ ಅಪರಾಧ ಕೃತ್ಯಗಳು ನಡೆದು ಒಂದೇ ಒಂದು ಪ್ರಕರಣ ಪತ್ತೆಯಾಗದಿರುವ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಹೊಸದಿಲ್ಲಿಯಲ್ಲಿ ನಿರ್ಭಯ ಅತ್ಯಾಚಾರ, ಹತ್ಯೆ ನಡೆದ ದಿನ ಹಾಗೂ ಅತ್ಯಾಚಾರ ವಿರೋಧಿ ದಿನದಂದೇ ಮಹಿಳೆಯ ಘನತೆ, ಹಕ್ಕು ಹಾಗೂ ಸಮಾನತೆಗಾಗಿ ಒತ್ತಾಯಿಸಿ ಈ ಸಮಾವೇಶ ನಡೆಯುತ್ತಿದೆ ಎಂದವರು ವಿವರಿಸಿದರು.
ನಾವು ನಡೆಸುತ್ತಿರುವ ಈ ಹೋರಾಟ ಯಾವುದೇ ವ್ಯಕ್ತಿ, ಸಂಸ್ಥೆ, ಧರ್ಮದ ವಿರುದ್ಧವಲ್ಲ. ನಾವು ಯಾರನ್ನೂ ಅಪರಾಧಿಗಳೆಂದು ಗುರುತಿಸಿಲ್ಲ, ಹೆಸರಿಸಿಲ್ಲ. ಕಳೆದ ನಾಲ್ಕು ದಶಕಗಳಿಂದ ಧರ್ಮಸ್ಥಳ ಹಾಗೂ ಆಸುಪಾಸಿನಲ್ಲಿ ನಡೆದಿರುವ ಅಸಂಖ್ಯಾತ ಮಹಿಳೆಯರ ಅಸಹಜ ಸಾವು, ಅತ್ಯಾಚಾರ, ದೌರ್ಜನ್ಯ ಹಾಗೂ ನಾಪತ್ತೆ ಪ್ರಕರಣಗಳಿಗೆ ಕಾರಣ ಯಾರು ಎಂಬುದನ್ನು ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಅವರಿಗೆ ಶಿಕ್ಷೆ ಕೊಡಿ. ಈ ಮೂಲಕ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಹಾಗೂ ಅವರ ಕುಟುಂಬಿಕರಿಗೆ ನ್ಯಾಯ ಒದಗಿಸಿಕೊಡಿ ಎಂಬುದೇ ಸರಕಾರ ಹಾಗೂ ಇದಕ್ಕಾಗಿಯೇ ನೇಮಕಗೊಂಡ ಎಸ್ಐಟಿಗೆ ನಮ್ಮ ಒತ್ತಾಯಪೂರ್ವಕ ಆಗ್ರಹವಾಗಿದೆ. ಇದಕ್ಕಾಗಿಯೇ ವಿವಿಧೆಡೆ ನಡೆದ ಹೋರಾಟವನ್ನು ನಾವೀಗ ಬೆಳ್ತಂಗಡಿಯಲ್ಲಿ ಆಯೋಜಿಸುತಿದ್ದೇವೆ ಎಂದವರು ಹೇಳಿದರು.
ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಅಸಹಜ ಸಾವಿನ ಕುರಿತಂತೆ ತನಿಖೆ ನಡೆಸಲೆಂದೇ ರಾಜ್ಯ ಸರಕಾರದಿಂದ ನೇಮಕಗೊಂಡ ಎಸ್ಐಟಿ, ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿರುವಂತೆ ಇಲ್ಲಿ ದಾಖಲಾಗಿರುವ, ದಾಖಲಾಗುವ ಎಲ್ಲಾ ಅಪರಾಧ ಪ್ರಕರಣಗಳ ತನಿಖೆ ನಡೆಸಬೇಕು. ಇದರಲ್ಲಿ ನೊಂದ ಮಹಿಳೆಯರಿಗೆ ನ್ಯಾಯದೊರಕಿಸುವುದಕ್ಕೆ ಅವರು ಆದ್ಯತೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾರ ವಿರುದ್ಧವೆಲ್ಲಾ ಆರೋಪ ಮಾಡಲಾಗಿದೆಯೋ ಅಂಥ ಶಂಕಿತ ಆರೋಪಿಗಳೆಲ್ಲರ ವಿಚಾರಣೆಯನ್ನೂ ಮಾಡಬೇಕೆಂಬುದು ಎಸ್ಐಟಿಗೆ ನಮ್ಮ ಒತ್ತಾಯವಾಗಿದೆ. ಕೊಂದವರು ಯಾರು, ಅತ್ಯಾಚಾರಿಗಳು ಯಾರು ಎಂಬುದನ್ನು ನಾವು ಬೊಟ್ಟು ಮಾಡುವುದಿಲ್ಲ. ಅದನ್ನು ಸರಕಾರ ಹಾಗೂ ಎಸ್ಐಟಿ ಕಂಡುಕೊಳ್ಳಬೇಕು ಎಂದು ಜ್ಯೋತಿ ಎಸ್. ಹೇಳಿದರು.
ಇದು ನೊಂದ ಮಹಿಳೆಯರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಮಹಿಳೆಯರೇ, ಮಹಿಳೆಯರಿಗಾಗಿ ಆಯೋಜಿಸುತ್ತಿರುವ ಹೋರಾಟವಾಗಿದೆ. ಇದರಲ್ಲಿ ಡಿ.16ರಂದು ಬೆಳಗ್ಗೆ 10ಗಂಟೆಗೆ ಮಹಿಳೆಯರು ಮಾರಿಗುಡಿಯಿಂದ ಬೆಳ್ತಂಗಡಿ ತಾಲೂಕು ಕಚೇರಿಯವರೆಗೆ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಮೌನ ಮೆರವಣಿಗೆ ನಡೆಸಲಿದ್ದಾರೆ. ಬಹಿರಂಗ ಸಭಾ ಕಾರ್ಯಕ್ರಮದಲ್ಲಿ ಮಾತ್ರ ಪ್ರಮುಖರ ಭಾಷಣಗಳಿರುತ್ತವೆ ಎಂದೂ ಜ್ಯೋತಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ, ಸೌಜನ್ಯ ಪರ ಹೋರಾಟಗಾರ್ತಿ ಶಶಿಕಲಾ ಶೆಟ್ಟಿ, ಗೀತಾ ಸುರತ್ಕಲ್, ವಸಂತಿ ಶಿವಾನಂದ ಹಾಗೂ ಕುಸುಮ ಕಟ್ಕೆರೆ ಉಪಸ್ಥಿತರಿದ್ದರು.
ಸಮಾವೇಶ ರದ್ದಾಗಿಲ್ಲ.... :
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಡಿ.16ರ ಮಹಿಳಾ ನ್ಯಾಯ ಸಮಾವೇಶದ ಕುರಿತಂತೆ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಸಮಾವೇಶ ರದ್ದಾಗಿದೆ ಎಂದು ಸುಳ್ಳು ಮಾಹಿತಿಯನ್ನು ಹರಿಯಬಿಟ್ಟಿದ್ದಾರೆ.
ಇಂಥ ಮಾಹಿತಿಗಳನ್ನು ಯಾರೂ ನಂಬಬಾರದೆಂದು ವಿನಂತಿಸಿದ ಜ್ಯೋತಿ ಅವರು, ಡಿ.16ರಂದು ಖಂಡಿತ ಸಮಾವೇಶ ನಡೆದೇ ನಡೆಯುತ್ತದೆ. ಸಮಾವೇಶಕ್ಕಾಗಿ ಬೇಕಾದ ಎಲ್ಲಾ ಪರವಾನಿಗೆಯನ್ನು ವಿವಿಧ ಇಲಾಖೆಗಳಿಂದ ಈಗಾಗಲೇ ಪಡೆದುಕೊಂಡಿದ್ದೇವೆ. ಆದ್ದರಿಂದ ಯಾವುದೇ ಮೂಲದಿಂದ ಇಂಥ ಸುದ್ದಿ ಬಂದರೆ ನಂಬಬೇಡಿ. ಏನಾದರೂ ಬದಲಾವಣೆ ಇದ್ದರೆ, ನಾವೇ ಅಧಿಕೃತವಾಗಿ ನಿಮಗೆ ತಿಳಿಸುತ್ತೇವೆ. ಅಂಥ ಸಾಧ್ಯತೆ ಇಲ್ಲ. ಹೀಗಾಗಿ ಡಿ.16ರ ಸಮಾವೇಶ ನಡೆದೇ ನಡೆಯುತ್ತದೆ ಎಂದವರು ಹೇಳಿದರು.
ಅತ್ಯಾಚಾರ, ಅಸಹಜ ಸಾವಿನ ಕುರಿತಂತೆ ತನಿಖೆಗಾಗಿ ನೇಮಕಗೊಂಡ ಎಸ್ಐಟಿ ತನಿಖೆ, ಇದೀಗ ಬುರುಡೆ ಪ್ರಕರಣದ ಬಗ್ಗೆ ಮಾತ್ರ ತನಿಖೆ ನಡೆಸುವ ಗುಮಾನಿ ನಮಗೂ ಇದೆ. ದೂರು ಕೊಟ್ಟವರ ವಿರುದ್ಧವೇ ತನಿಖೆ ನಡೆಯುತ್ತಿರುವ ಸುದ್ದಿ ಕೇಳಿಬರುತಿದ್ದು, ಇದರ ಕುರಿತೂ ನಾವು ಸ್ಪಷ್ಟನೆ ಬಯಸುತ್ತೇವೆ ಎಂದರು.







