Udupi | ವಿಶ್ವ ಪರಿಸರ ದಿನಾಚರಣೆ : ಸ್ವಚ್ಛತಾ ಅಭಿಯಾನ

ಉಡುಪಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇನ್ಸ್ಪಾಯರ್ ಯೋಜನೆಯ ಸಮುದಾಯ ವಿಭಾಗದ ತಂಡವು ಇಕೋ ಕ್ಲಬ್ ನ ಸಹಯೋಗದೊಂದಿಗೆ ಪ್ರಕೃತಿಯಿಂದ ಪ್ರೇರಿತವಾಗಿ, ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ ಎಂಬ ಜಾಗತಿಕ ಧ್ಯೇಯವಾಕ್ಯದಡಿ ಸ್ವಚ್ಛತಾ ಅಭಿಯಾನವನ್ನು ಉಡುಪಿ ಲೋಂಬಾರ್ಡ್ ಮೆಮೊರಿಯಲ್(ಮಿಷನ್)ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿತ್ತು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿ, ಆವರಣದ ವಿವಿಧ ಪ್ರದೇಶಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ಬಳಸಿ ಸೃಜನಾತ್ಮಕವಾದ ಪ್ಲಾಸ್ಟಿಕ್ ಮರದ ಶಿಲ್ಪವನ್ನು ನಿರ್ಮಿಸಿದರು. ಇಕೋ ಕ್ಲಬ್ ಅಧ್ಯಕ್ಷರು ಈ ಶಿಲ್ಪದ ಮಹತ್ವವನ್ನು ವಿವರಿಸಿ, ಪ್ಲಾಸಿಕ್ ದುಷ್ಪರಿಣಾಮಗಳು ಹಾಗೂ ಸುಸ್ಥಿರ ಜೀವನಶೈಲಿಯ ಅಗತ್ಯತೆ ಯನ್ನು ಪ್ರತಿಬಿಂಬಿಸುವ ಸಂಕೇತವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಸಿಗಳನ್ನು ನೆಡಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿದರು. ಆಸ್ಪತ್ರೆಯ ಚಾಪ್ಲಿನ್ ರೆ.ರೈಚಲ್ ಡಿಸಿಲ್ವಾ ಮಾತನಾಡಿ, ದೇವರಿಂದ ಸೃಷ್ಟಿಸಲ್ಪಟ್ಟ ಈ ಪ್ರಕೃತಿಯನ್ನು ಹಾಳು ಮಾಡದೆ ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ಪ್ರಯುಕ್ತ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಛಾಯಚಿತ್ರಗಳ ತೀರ್ಪುಗಾರರಾಗಿ ಛಾಯಾಚಿತ್ರಗಾಹ್ರಕ ಜನಾರ್ದನ್ ಕೊಡವೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ಸಹಕರಿಸಿದರು.






