ಬೈಲೂರು ಗೋವಿಂದರಾಜ್ ಶೆಟ್ಟಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

ಉಡುಪಿ, ಅ.22: ಭಜನಾ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಉಡುಪಿ ಬೈಲೂರಿನ ಗೋವಿಂದ ರಾಜ್ ಶೆಟ್ಟಿ ಅವರು 2026ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಅ.24ರಂದು ಮಂಡ್ಯದ ಸುಭಾಷ್ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಜಾನಪದ ಪ್ರಶಸ್ತಿಗೆ ಆಯ್ಕೆಯಾದ ಗೋವಿಂದರಾಜ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.
ಪರಿಚಯ: ಬೈಲೂರು ಗೋವಿಂದರಾಜ ಶೆಟ್ಟಿ ಅವರು 1950ರಲ್ಲಿ ಬೈಲೂರು ಗ್ರಾಮದಲ್ಲಿ ಜನಿಸಿದ್ದು, ಸಮಾಜಮುಖಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಪ್ರಿಯತೆ ಪಡೆದಿದ್ದಾರೆ. ಪ್ರಾರಂಭದಲ್ಲಿ ಮುಂಬಯಿಯಲ್ಲಿ ಟೈಲರ್ ಆಗಿದ್ದ ಅವರು ಬಳಿಕ ಉಡುಪಿಗೆ ಮರಳಿ ಸ್ವಂತ ಟೈಲರಿಂಗ್ ಅಂಗಡಿ ತೆರೆದು ತಮ್ಮ ಪರಿಶ್ರಮ, ಕೌಶಲ್ಯ ಮತ್ತು ಪ್ರಾಮಾಣಿಕ ಸೇವೆಯಿಂದ ಜನರ ವಿಶ್ವಾಸ ಗಳಿಸಿದರು.
ಭಜನಾ ಕ್ಷೇತ್ರದಲ್ಲಿ ಗೋವಿಂದರಾಜ ಶೆಟ್ಟಿ ಅವರ ಕೊಡುಗೆ ಗಮನಾರ್ಹ. ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಭಜನಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾ ದ್ಯಂತ 1,000ಕ್ಕೂ ಅಧಿಕ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬೈಲೂರು ಮಹಿಷಮರ್ಧಿನಿ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದು, ಅದರ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ಭಜನೆಯ ಮೂಲಕ ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಒಗ್ಗಟ್ಟನ್ನು ಬೆಳೆಸಲು ಅವರು ಸಲ್ಲಿಸಿರುವ ಸೇವೆ ಅನೇಕರಿಗೆ ಪ್ರೇರಣೆಯಾಗಿದೆ. ಭಜನಾ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆಯನ್ನು ಗೌರವಿಸಿ ಅನೇಕ ಸಂಘ- ಸಂಸ್ಥೆಗಳು ಹಾಗೂ ಧಾರ್ಮಿಕ ವೇದಿಕೆಗಳು ಅವರನ್ನು ಸನ್ಮಾನಿಸಿವೆ.
ತಮ್ಮ ವೃತ್ತಿ ಕೌಶಲ್ಯ, ಭಜನಾ ಸೇವೆ, ಧಾರ್ಮಿಕ ಜ್ಞಾನ ಮತ್ತು ಸಮಾಜದತ್ತ ಇರುವ ಬದ್ಧತೆಯಿಂದ ಬೈಲೂರು ಗೋವಿಂದರಾಜ ಶೆಟ್ಟಿ ಬೈಲೂರು ಹಾಗೂ ಉಡುಪಿ ಪರಿಸರದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.






