ಪರಶುರಾಮ ಪ್ರತಿಮೆ ವಿವಾದ | ಸುನಿಲ್ ಕುಮಾರ್ ಮೊದಲು ಜನತೆಯ ಕ್ಷಮೆಯಾಚಿಸಲಿ : ಸುಭಿತ್ ಕುಮಾರ್ ಆಗ್ರಹ

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಮತ್ತು ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ಪುರಸಭೆ ಮಾಜಿ ಸದಸ್ಯ ಸುಭಿತ್ ಕುಮಾರ್ ಎನ್.ಆರ್.ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಪ್ಪುಗಳನ್ನು ಮರೆಮಾಚುವ ಉದ್ದೇಶದಿಂದ ಸುನಿಲ್ ಕುಮಾರ್ ವಾಹನ ಜಾಥಾ ನಡೆಸುತ್ತಿದ್ದು, ಅವರು ಮೊದಲು ಕಾರ್ಕಳದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಶುರಾಮ ಪ್ರತಿಮೆ ವಿವಾದದಲ್ಲಿ ಶಾಸಕರ ರಾಜಕೀಯ ಲಾಭದ ಪ್ರಯತ್ನದಿಂದಾಗಿ ಶಿಲ್ಪಿ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
“ಅಂದು ಪ್ರಾಮಾಣಿಕವಾಗಿ ಮತ್ತು ಗುಣಮಟ್ಟದ ಪ್ರತಿಮೆ ನಿರ್ಮಿಸಿದ್ದರೆ ಇಂದು ಶಿಲ್ಪಿ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜೈಲು ಸೇರುವ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರತಿಮೆಯ ಅರ್ಧ ಭಾಗವನ್ನು ರಾತ್ರೋರಾತ್ರಿ ತೆರವುಗೊಳಿಸುವ ಅಗತ್ಯವೇನಿತ್ತು? ಬೆಳಗಾಗುವ ಮೊದಲೇ ಕಾಮಗಾರಿ ಮುಗಿಸಬೇಕು ಎಂದು ತರಾತುರಿಯಲ್ಲಿ ಸೂಚನೆ ನೀಡಿದ ವೀಡಿಯೊವನ್ನು ಕಾರ್ಕಳದ ಜನತೆ ನೋಡಿದ್ದಾರೆ” ಎಂದು ಟೀಕಿಸಿದರು.
ರುಂಡವಿಲ್ಲದೆ ಕೇವಲ ಎರಡು ಕಾಲುಗಳ ರೂಪದಲ್ಲಿ ನಿಂತಿದ್ದ ಪರಶುರಾಮ ಪ್ರತಿಮೆಗೆ ಮರುಜೀವ ನೀಡಬೇಕು ಹಾಗೂ ಉಮಿಕಲ್ ಬೆಟ್ಟದಲ್ಲಿ ಮತ್ತೆ ಪ್ರತಿಮೆ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ 5.5 ಲಕ್ಷ ರೂ.ಗಳನ್ನು ನ್ಯಾಯಾಲಯಕ್ಕೆ ಠೇವಣಿ ಇರಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರತಿಮೆ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಉಮಿಕಲ್ ಬೆಟ್ಟದಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಿಸುವ ನಿರ್ಣಯ ಕೈಗೊಂಡಿದೆ. ಈ ನಿರ್ಣಯದ ಶ್ರೇಯಸ್ಸು ಪಡೆಯುವ ಉದ್ದೇಶದಿಂದ ಸುನಿಲ್ ಕುಮಾರ್ ವಾಹನ ಜಾಥಾ ನಡೆಸಿ ಜನರ ಮುಂದೆ ಅಪಹಾಸ್ಯಕ್ಕೀಡಾಗಿದ್ದಾರೆ ಎಂದು ಆರೋಪಿಸಿದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದ ಆರಂಭದಲ್ಲಿಯೇ ಹಲವು ತಪ್ಪುಗಳು ನಡೆದಿವೆ. ಉಮಿಕಲ್ ಬೆಟ್ಟದಲ್ಲಿ ತುಳುನಾಡಿನ ದೈವ-ದೇವರುಗಳ ಐತಿಹ್ಯವಿದ್ದು, ಪುರಾತನ ಕಾಲದಿಂದಲೂ ಅಲ್ಲಿ ದೈವಶಕ್ತಿಯ ಆರಾಧನೆ ನಡೆಯುತ್ತಿತ್ತು ಎಂಬ ಸ್ಥಳೀಯರ ನಂಬಿಕೆಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ವಿಧಾನಸೌಧದಲ್ಲಿ ಇತರ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಶಾಸಕರು ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ವಿಧಾನಸಭೆಯಲ್ಲಿ ಏಕೆ ಪ್ರಶ್ನೆ ಕೇಳಿಲ್ಲ? ಪ್ರತಿಮೆ ಪುನರ್‌ನಿರ್ಮಾಣಕ್ಕೆ ಅನುದಾನ ನೀಡುವಂತೆ ಏಕೆ ಒತ್ತಾಯಿಸಿಲ್ಲ? ಸಾರ್ವಜನಿಕರಿಗೆ ಥೀಮ್ ಪಾರ್ಕ್ ಪ್ರವೇಶ ಮುಕ್ತಗೊಳಿಸುವ ಬಗ್ಗೆ ಸದನದಲ್ಲಿ ಏಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದರು.
ಕಳೆದ 22 ವರ್ಷಗಳಲ್ಲಿ ಕಾರ್ಕಳದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಗಳಿಂದಾಗಿ ಶಾಸಕರು ಜನವಿರೋಧ ಎದುರಿಸುತ್ತಿದ್ದಾರೆ. ತಮ್ಮ ಪರವಾಗಿ ಭಾಷಣ ಮಾಡಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ ಅವರು, ರಾಜ್ಯದ 65 ಬಿಜೆಪಿ ಶಾಸಕರನ್ನು ಕರೆತಂದರೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಉದಯ ಶೆಟ್ಟಿ ಮುನಿಯಾಲು ಅವರು ಹಣ ನೀಡಲು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಸುನಿಲ್ ಕುಮಾರ್ ಆರೋಪಕ್ಕೂ ಪ್ರತಿಕ್ರಿಯಿಸಿದ ಸುಭಿತ್ ಕುಮಾರ್, ಕಮಿಷನ್ ಹಣ ಬಾಕಿ ಇದ್ದರೆ ವೈಯಕ್ತಿಕವಾಗಿ ಕೇಳಿಕೊಳ್ಳಬೇಕು. ಅದಕ್ಕಾಗಿ ಜನರನ್ನು ಸೇರಿಸಿ ಸಭೆ ನಡೆಸಿ ಭಾಷಣ ಮಾಡುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಉದಯ ಶೆಟ್ಟಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದೂ ದೂರಿದರು.
ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ವಿರುದ್ಧ ಶಾಸಕರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆಕ್ಷೇಪಿಸಿದ ಅವರು, ತಾವು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಗೋಪಾಲ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಬೆಳೆದವರು. ಸಂಸ್ಕಾರ ಮರೆತು ಮಾತನಾಡುವ ಸಂಪ್ರದಾಯ ನಮ್ಮದಲ್ಲ ಎಂದರು.
“ಪರಶುರಾಮ ಪ್ರತಿಮೆ ವಿಚಾರದಲ್ಲಿ ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ಬೆಟ್ಟದ ಮೇಲಿರುವ ಎರಡು ಕಾಲುಗಳು ಹಾಗೂ ಕಾರ್ಕಳ ಪೊಲೀಸ್ ಠಾಣೆಯಲ್ಲಿರುವ ಎರಡು ಕಾಲುಗಳ ಕುರಿತು ಉತ್ತರ ನೀಡಿ. ಪ್ರತಿಮೆ ವಿಚಾರದಲ್ಲಿ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಂಡು ಜನತೆಯ ಕ್ಷಮೆಯಾಚಿಸಿ, ಕಾರ್ಕಳದ ಅಭಿವೃದ್ಧಿಗೆ ಕೈಜೋಡಿಸಿ” ಎಂದು ಆಗ್ರಹಿಸಿದರು.
ಶಾಸಕರು ರೌಡಿಸಂ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ವರ್ತಿಸಬೇಕು. 2004ರ ಭಜರಂಗದಳದ ನಾಯಕನ ರಾಜಕೀಯ ಶೈಲಿಯನ್ನು ಮುಂದುವರಿಸುವ ಬದಲು ಕಾರ್ಕಳದ ಶಾಸಕರಾಗಿ ಪ್ರಬುದ್ಧತೆ ತೋರಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ, ಮಾಜಿ ಪುರಸಭೆ ಸದಸ್ಯ ವಿವೇಕಾನಂದ ಶೆಣೈ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮತ್ತು ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.






