ಜನಪ್ರಿಯತೆ ಸಹಿಸಲಾಗದೆ ಸುನಿಲ್ ಕುಮಾರ್ ತಂಡದಿಂದ ಅಪಪ್ರಚಾರ : ಉದಯ ಶೆಟ್ಟಿ ಮುನಿಯಲು ಆರೋಪ

ಕಾರ್ಕಳ, ನ.29: ಜನಪರ ಆಡಳಿತ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಮನ ಗೆದ್ದ ಕಾಂಗ್ರೆಸ್ ಸರಕಾರ ಹಾಗೂ ಈ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ತನ್ನ ವಿರುದ್ಧ ಶಾಸಕ ಸುನೀಲ್ ಕುಮಾರ್ ತಂಡ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಕಾರ್ಕಳ ಪತ್ರಿಕಾ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರವನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡುವಲ್ಲಿ ಯತ್ನಿಸಿದರೆ ಸುನೀಲ್ ಕುಮಾರ್ ಅಡ್ಡಗಾಲು ಹಾಕುತ್ತಿದ್ದು, ಇದು ಕಾರ್ಕಳದ ಅಭಿವೃದ್ಧಿಗೆ ಇವರ ಕೊಡುಗೆಯೇ? ಎಂದು ಪ್ರಶ್ನಿಸಿದರು.
21 ವರ್ಷಗಳಿಂದ ಕಾರ್ಕಳದಲ್ಲಿ ಶಾಸಕರಾಗಿರುವವರಿಗೆ ಇಲ್ಲಿ ಬೇರೆ ನಾಯಕರು ಬೆಳೆಯುವುದನ್ನು ನೋಡಲಾಗುತ್ತಿಲ್ಲ. ಸಣ್ಣಪುಟ್ಟ ವಿಚಾರಕ್ಕೂ ದ್ವೇಷ ರಾಜಕೀಯ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ತೇಜೋವಧೆಗೆ ಇಳಿದಿದ್ದಾರೆ. ಪರಶುರಾಮ ನಕಲಿ ಪ್ರತಿಮೆ ಹಗರಣ, ಸಿಮೆಂಟ್ ಹಗರಣ, ಎಣ್ಣೆಹೊಳೆ ಅಣೆಕಟ್ಟಿನಲ್ಲಿ ಅವ್ಯವಹಾರ ಇತ್ಯಾದಿ ಹಗರಣಗಳಿಂದ ಹೆಸರು ಕೆಡಿಸಿಕೊಂಡಿರುವ ಶಾಸಕರು, ಇದೀಗ ಸ್ವಂತ ಹೆಸರು ಉಳಿಸಿಕೊಳ್ಳಲು ತನ್ನ ಹೆಸರನ್ನು ಹಾಳುಗೆಡಹಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಮಾಜಿ ಪುರಸಭಾ ಅಧ್ಯಕ್ಷೆ ಪ್ರತಿಮಾ ರಾಣೆ ಉಪಸ್ಥಿತರಿದ್ದರು.







