ವಂಡ್ಸೆ: ರೈತ ಕೂಲಿಕಾರರ ಕಾರ್ಮಿಕರ ಪ್ರಚಾರಾಂದೋಲನ

ಕುಂದಾಪುರ, ಆ.10: ಕ್ವಿಟ್ ಇಂಡಿಯಾ ಚಳುವಳಿ ನೆನಪಿನಲ್ಲಿ ವಂಡ್ಸೆ ಪೇಟೆಯಲ್ಲಿ ಆ.9ರಂದು ಪ್ರಚಾರಾಂದೋಲನ ಸಭೆ ನಡೆಯಿತು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, 1942ರ ಆಗಸ್ಟ್ 09ರಂದು ದೇಶದ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಪ್ರೇಮಿಗಳು ಅಂದಿನ ಕಾಂಗ್ರೆಸ್ ವೇದಿಕೆಯಲ್ಲಿ ಒಬ್ಬ ಮುಸ್ಲಿಂ ಹೋರಾಟಗಾರ ನೀಡಿದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ದೇಶದ ಜನರನ್ನು ಬಡಿದೆಬ್ಬಿಸಿತು. ಇಂದು ನಾವು ‘ನವ ಉದಾರ ವಾದಿ ಆರ್ಥಿಕ ನೀತಿಗಳನ್ನು ಜಾರಿ ಮಾಡುತ್ತಿರುವ ಬಿಜೆಪಿಗರೇ ಅಧಿಕಾರ ಬಿಟ್ಟು ತೊಲಗಿ’ ಎಂದು ಹೇಳಬೇಕಾಗಿದೆ ಎಂದರು.
ಅಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹಿಂದೂ ಮುಸ್ಲಿಂರು ಒಗ್ಗಟ್ಟಾಗಿ ಹೋರಾಡಿದ್ದರು. ಆದರೆ ಇಂದು ಬಿಜೆಪಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆಡಳಿತ ಭದ್ರವಾಗಿ ಇರಿಸಿಕೊಂಡು ದೇಶದ ಸಂಪತ್ತನ್ನು ದೊಡ್ಡ ಬಂಡವಾಳ ಗಾರರಿಗೆ ಮಾರಾಟ ಮಾಡುತ್ತಿದೆ. ನಾವಿಂದು ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ತೀವ್ರ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ರೈತ ಮುಖಂಡ ಚಂದ್ರಶೇಖರ ವಿ, ಕಾರ್ಮಿಕ ಮುಖಂಡ ಎಚ್.ನರಸಿಂಹ, ಕಟ್ಟಡ ಕಾರ್ಮಿಕರ ವಂಡ್ಸೆ ಘಟಕದ ಅಧ್ಯಕ್ಷ ಶಂಕರ ಆಚಾರ್, ಗುಲಾಬಿ ಮೊದಲಾದವರಿದ್ದರು. ಘಟಕ ಕಾರ್ಯದರ್ಶಿ ಭಾಸ್ಕರ ಶಾರ್ಕೆ ಸ್ವಾಗತಿಸಿ ವಂದಿಸಿದರು.







