ವಾರಾಹಿ ಯೋಜನೆ ಸಮಸ್ಯೆ ಶೀಘ್ರವೇ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ, ಜ.26: ಜಿಲ್ಲೆಯ ರೈತರ ಅನುಕೂಲಕ್ಕಾಗಿ ಅನುಷ್ಠಾನಗೊಂಡಿರುವ ವಾರಾಹಿ ನೀರಾವರಿ ಯೋಜನೆ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದು, ಯೋಜನೆಯ ಬಗ್ಗೆ ತಾಂತ್ರಿಕ ತಂಡದ ಜೊತೆ ಸಭೆ ಮಾಡುತ್ತೇವೆ. ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಲ್ಪಿಸುತ್ತೇವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾರಾಹಿ ನೀರಾವರಿ ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ನಡೆದಿರುವ ಕಚ್ಚಾಟದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ವಾರಾಹಿ ಯೋಜನೆ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದು, ಯೋಜನೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮಾಹಿತಿ ಇದೆ. ಇದು ರೈತರ ಅನುಕೂಲಕ್ಕಾಗಿ ಮಾಡಿದ ಯೋಜನೆ, ತಾಂತ್ರಿಕ ತಂಡ ಬಂದು ಹೋಗಿದೆ. ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಬಗ್ಗೆ ನಾನು ಮಾತನಾಡಲ್ಲ. ತಾಂತ್ರಿಕ ತಂಡ ಪರಿಶೀಲನೆ ನಡೆಸಿದೆ, ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿ ಇದ್ದು, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೆ. ಈ ಯೋಜನೆ ನೆನೆಗುದಿಗೆ ಬಿದ್ದಿರುವುದು ದುರ್ದೈವ. ನಮ್ಮ ಕಾಲಘಟ್ಟದಲ್ಲಿ ಖಂಡಿತವಾಗಿ ಇದನ್ನು ಪೂರ್ಣಗೊಳಿಸುತ್ತೇವೆ ಎಂದರು.
ಪರಶುರಾಮ ಮೂರ್ತಿ ಶೀಘ್ರ :
ಪರಶುರಾಮ ಥೀಂ ಪಾರ್ಕ್ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಮಾಜಿ ಸಚಿವ ಸುನೀಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪರಶುರಾಮನನ್ನು ಕರಾವಳಿಯಲ್ಲಿ ಆರಾಧಿಸಲಾಗುತ್ತದೆ. ನಮಗೂ ಕೂಡ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಇಷ್ಟ ಇಲ್ಲ. ಸುನೀಲ್ ಕುಮಾರ್ ಪರಶುರಾಮನ ಮೂರ್ತಿ ಯನ್ನು ಫೈಬರ್ ನಲ್ಲಿ ಮಾಡಿಸಿದ್ದರು. ಫೈಬರ್ ನಲ್ಲಿ ಮಾಡಿ ಕಂಚಿನ ಮೂರ್ತಿ ಎಂದು ನಂಬಿಸಿದ್ದರು. ಅವರು ಜನರ ದಿಕ್ಕು ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಜನರನ್ನು ನಂಬಿಸಿ ಮೋಸ ಮಾಡಿದ್ದು, ರಾಜಕೀಯ ಮಾಡಿದ್ದು ಸುನೀಲ್ ಕುಮಾರ್, ಕಾಂಗ್ರೆಸ್ ನವರಿಗೆ ದೇವರ ವಿಚಾರದಲ್ಲಿ ರಾಜಕೀಯ ಮಾಡುವ ದರ್ದು ಇಲ್ಲ. ಆದಷ್ಟು ಬೇಗ ಪರಶುರಾಮ ಮೂರ್ತಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡ್ತೇವೆ ಎಂದು ಸ್ಪಷ್ಟ ಪಡಿಸಿದರು.
ಡಿಸಿ ಧ್ವಜ ಹಾರಿಸಿದ ವಿಚಾರ :
ಉಡುಪಿ ಪರ್ಯಾಯ ವೇಳೆ ಜಿಲ್ಲಾಧಿಕಾರಿ ಅವರು ಭಗವದ್ವಜ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದ ವಿವಾದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಮನೋಭಾವನೆಯನ್ನು ಕೆರಳಿಸಬಾರದು. ಈ ವಿಚಾರ ನನಗೆ ಗೊತ್ತಿದೆ. ದ್ವಜ ಹಾರಿಸಿದ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಸಚಿವೆ ಮನವಿ ಮಾಡಿದರು.
ಐಕ್ಯತೆಗಾಗಿ ದ್ವೇಷ ಭಾಷಣ ವಿರುದ್ಧ ಕಾನೂನು :
ದ್ವೇಷ ಭಾಷಣ ಕಾನೂನು ಜಾರಿಗೂ ಮುನ್ನ ನೋಟಿಸ್ ನೀಡಿರುವುದರ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈಗ ಕಾಂಗ್ರೆಸ್ ಸರಕಾರ ಇದೆ. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತಂದಿದ್ದೇವೆ. ಭವಿಷ್ಯದಲ್ಲಿ ಯಾವತ್ತಾದರೂ ಬಿಜೆಪಿ ಸರ್ಕಾರ ಬರಬಹುದು. ಅವರು ನಮ್ಮ ವಿರುದ್ಧವೂ ಇದನ್ನು ಬಳಕೆ ಮಾಡಬಹುದು. ದೇಶದ ಐಕ್ಯತೆ, ಸಮಗ್ರತೆ ಮಾತ್ರ ದ್ವೇಷ ಭಾಷಣ ಮಸೂದೆ ತಂದಿರುವ ಉದ್ದೇಶ ಎಂದರು.
ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ಈ ಕಾರಣಕ್ಕೆ ಸಂವಿಧಾನದ ಆಶಯದಂತೆ ಮಸೂದೆ ತಂದಿದ್ದೇವೆ. ಬಿಜೆಪಿಯವರು ಏನಾದರೂ ಹೇಳಲಿ, ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುದು ಮಾತ್ರ ನಮ್ಮ ಉದ್ದೇಶ, ಕಾಂಗ್ರೆಸಿಗರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಅವರ ಮೇಲೂ ಕಾನೂನು ಜಾರಿಯಾಗುತ್ತದೆ ಎಂದರು.
ಸೈಂಟ್ ಮೇರಿಸ್ ದ್ವೀಪದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ಹೊಸ ಅನುಭವ. ಇಂದು ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ್ದು ಖುಷಿ ನೀಡಿತು. ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ದ್ವೀಪದಲ್ಲಿ ಧ್ವಜಾರೋಹಣ ಮಾಡಿದೆ. ಇದು ರೋಮಾಂಚಕ ಅನುಭವ. ಇದು ನನ್ನ ಭಾಗ್ಯ ಕೂಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.







