ಆ.30ರವರೆಗೆ ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ ಮೇಲಿನ ವಾಹನ ಸಂಚಾರ ನಿಷೇಧ

ಉಡುಪಿ, ಆ.7: ಜುಲೈ 30ರವರೆಗೆ ವಿಧಿಸಲಾಗಿದ್ದ ಸಿದ್ಧಾಪುರ- ಹೆಬ್ರಿ (ಹೆಬ್ರಿ- ಕುಚ್ಚೂರು-ಕಂಚರಕಾಳ- ಮಾಂಡಿಮೂರುಕೈ) ರಾಜ್ಯ ಹೆದ್ದಾರಿ 296ರ ಮೇಲಿನ ವಾಹನ ಸಂಚಾರ ನಿರ್ಬಂಧವನ್ನು ಆಗಸ್ಟ್ 30ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಅತಿಯಾದ ಮಳೆಯಿಂದ ಹಾನಿಗೊಂಡ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ ಮುಗಿದಿದ್ದರೂ, ಸದ್ಯ ಬೀಳುತ್ತಿರುವ ಭಾರೀ ಮಳೆಯಿಂದಾಗಿ ಅಪ್ರೋಚ್ ರಸ್ತೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲದ ಕಾರಣ ರಾಜ್ಯ ಹೆದ್ದಾರಿ ಮೇಲಿನ ವಾಹನ ಸಂಚಾರ ನಿರ್ಬಂಧವನ್ನು ಆ.30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ ಅವಧಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗದ ರಸ್ತೆ (ಮಾಡಿಮೂರಕೈ- ಮೀನುಗದ್ದೆ- ಬೇಳಂಜೆ- ಕುಚ್ಚೂರು- ಹೆಬ್ರಿ) ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಹುಲಿಕಲ್ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ
ಶಿವಮೊಗ್ಗ ಜಿಲ್ಲಾಧಿಕಾರಿಗಳ ಬಳಿಕ ಇದೀಗ ಉಡುಪಿ ಜಿಲ್ಲಾದಿಕಾರಿ ಸ್ವರೂಪ ಟಿ.ಕೆ. ಅವರೂ ತೀರ್ಥಹಳ್ಳಿ-ಕುಂದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ 52ರಲ್ಲಿ ಬಾಳೆಬರೆ ಘಾಟ್ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗದಲ್ಲಿ ಈ ವಾಹನಗಳು ಸಂಚರಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ರಾಜ್ಯ ಹೆದ್ದಾರಿ 52ರ ಬಾಳೆಬರೇ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ) ಹೇರ್‌ಪಿನ್ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣು ಕುಸಿದಿದ್ದು ಈ ನಿರ್ಬಂಧಕ್ಕೆ ಕಾರಣವಾಗಿದೆ. ಮಳೆಗಾಲ ಮುಗಿಯುವವರೆಗೆ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.







