ವಿಧಾನ ಪರಿಷತ್ ಉಪ ಚುನಾವಣೆ: ಜಡ್ಕಲ್ ಗ್ರಾಪಂ ಸದಸ್ಯರಿಂದ ಚುನಾವಣೆ ಬಹಿಷ್ಕಾರ

ಬೈಂದೂರು: ಕಸ್ತೂರಿ ರಂಗನ್ ವರದಿಯಲ್ಲಿ ತಮ್ಮ ಗ್ರಾಮಗಳನ್ನು ಸೇರಿಸಿರುವುದನ್ನು ವಿರೋಧಿಸಿ ತಾಲೂಕಿನ ಜಡ್ಕಲ್ ಗ್ರಾಪಂ ಸದಸ್ಯರು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಇಂದು ನಡೆಯುತ್ತಿರುವ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಜಡ್ಕಲ್ ಗ್ರಾಪಂನಲ್ಲಿ 18 ಸದಸ್ಯೆಯರಿದ್ದು, ಅಧ್ಯಕ್ಷೆ ಪಾರ್ವತಿ ಸೇರಿದಂತೆ ಯಾವೊಬ್ಬ ಸದಸ್ಯನೂ ಮಧ್ಯಾಹ್ನ 12 ಗಂಟೆಯವರಗೆ ಮತಗಟ್ಟೆಯ ಹತ್ತಿರ ಸುಳಿದಿಲ್ಲ.
ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಸೇರಿದಂತೆ ಮೂವರು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದು, ಮತದಾರರಿಗಾಗಿ ಕಾಯುತ್ತಿದ್ದಾರೆ.
ಜಡ್ಕಲ್ ಗ್ರಾಪಂನ ಜಡ್ಕಲ್ ಮತ್ತು ಮುದೂರು ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡುತ್ತಿವೆ. ತಮ್ಮ ಗ್ರಾಮಗಳನ್ನು ಈ ವರದಿಯಿಂದ ಕೈಬಿಡುವಂತೆ ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಎರಡು ಗ್ರಾಮಗಳಲ್ಲಿ 6,800 ಜನರಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ, ಕಸ್ತೂರಿ ರಂಗನ್ ವರದಿಯಲ್ಲಿ ನಮ್ಮ ಗ್ರಾಮಗಳನ್ನು ಸೇರಿಸಿರುವುದರಿಂದ ತುಂಬಾ ಸಮಸ್ಯೆಗಳಾಗುತ್ತಿವೆ. ಈಗಾಗಲೇ ಸಲ್ಲಿಕೆಯಾಗಿರುವ 35ಕ್ಕೂ ಅಧಿಕ ಭೂ ಪರಿವರ್ತನೆ ಅರ್ಜಿಗಳು ತಡೆಹಿಡಿಯಲ್ಪಟ್ಟಿವೆ. ಆದ್ದರಿಂದ ಈ ವರದಿಯಿಂದ ನಮ್ಮ ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ರವಿವಾರ ಎಡಿಸಿ ಮಮತಾ ದೇವಿ ಮತ್ತು ಎಸಿ ಮಹೇಶ್ಚಂದ್ರ ಅವರು ಜಡ್ಕಲ್ ಗ್ರಾಪಂಗೆ ಆಗಮಿಸಿ ಸದಸ್ಯರ ಮನವೊಲಿಕೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಕಸ್ತೂರಿ ರಂಗನ್ ವರದಿಯಿಂದ ನಮ್ಮ ಗ್ರಾಮಗಳನ್ನು ಕೈಬಿಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಪಾರ್ವತಿ ಹೇಳಿದರು.







