ಮತದಾರರಿಂದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ: ಉಡುಪಿ ಡಿಸಿ ಸ್ವರೂಪ

ಉಡುಪಿ, ಜ.25: ಭಾರತವು ಒಂದು ಪ್ರಜಾಪ್ರಭುತ್ವ ದೇಶವಾಗಿದ್ದು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತ ಆಶ್ರಯ ದಲ್ಲಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ರವಿವಾರ ನಡೆದ 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಚುನಾವಣಾ ಆಯೋಗ ಸ್ಥಾಪನೆಯಾದ ಸಂಸ್ಕರಣಾರ್ಥವಾಗಿ 2011ರಿಂದ ಪ್ರತಿ ವರ್ಷ ಜನವರಿ 25ನ್ನು ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ನಾಗರಿಕ ಸ್ನೇಹಿ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಮತದಾನವು ಐಚ್ಛಿಕವಾಗಿದ್ದು, ಹೆಚ್ಚು ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಗರಿಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಮತದಾನ ನಮಗೆ ನೀಡುತ್ತಿದ್ದು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಬಲಿದಾನ ದಿಂದ ದೇಶವು ಗುಲಾಮ ಗಿರಿಯಿಂದ ಮುಕ್ತವಾಯಿತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಪಡೆದುಕೊಂಡು ಮತದಾನದ ಅಧಿಕಾರವನ್ನು ಗಳಿಸಿದ್ದೇವೆ. 18 ವರ್ಷ ಮೀರಿದ ಎಲ್ಲಾ ವಯಸ್ಕರು ಪಕ್ಷಪಾತವಿಲ್ಲದೇ ಮತ ನೀಡಬಹುದು. ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸ ಬೇಕು. ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ನಾವು ಜವಾಬ್ದಾರಿಯುತವಾಗಿ ಮತ ಚಲಾಯಿಸ ಬೇಕು. ನಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಬಾರದು ಎಂದರು.
ನಿವೃತ್ತ ಸರಕಾರಿ ಅಭಿಯೋಜಕ ರಾಜು ಪೂಜಾರಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶಿವಪ್ರಸಾದ್ ಶೆಟ್ಟಿ ಎಸ್‌ಐಆರ್ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯುವ ಮತದಾರ ರಿಗೆ ಎಪಿಕ್ ಕಾರ್ಡುಗಳನ್ನು ವಿತರಿಸಲಾಯಿತು. ಮತದಾನ ನಿಮಿತ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉತ್ತಮವಾಗಿ ಕಾರ್ಯನಿರ್ವಹಿಸಿದ 5 ಜನ ಬಿಎಲ್‌ಓಗಳನ್ನು ಹಾಗೂ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ನಿರ್ವಹಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಸ್.ಜ್ಯೋತಿಶ್ರೀ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸ್ವಾಗತಿಸಿದರು. ಗಂಗಾಧರ್ ಕೆ. ನಿರೂಪಿಸಿ, ವಂದಿಸಿದರು.







