ಕೋಡಿ ಸೀವಾಕ್ ಬಳಿ ಅಲೆಗಳ ಅಬ್ಬರ: ಪ್ರವಾಸಿಗರಲ್ಲಿ ಇರಲಿ ಎಚ್ಚರ

ಕುಂದಾಪುರ ಕೋಡಿಯ ಸೀ ವಾಕ್ ಬಳಿ ಶುಕ್ರವಾರ ಕಂಡುಬಂದ ಅಲೆಯ ಅಬ್ಬರ (ಪೋಟೊ: ಯೋಗೀಶ್ ಕುಂಭಾಸಿ)
ಕುಂದಾಪುರ, ಜು.10: ಕುಂದಾಪುರದ ಪ್ರವಾಸಿ ತಾಣಗಳಲ್ಲಿ ಒಂದಾದ ಕೋಡಿ ಸಮೀಪದ ಸೀ ವಾಕ್ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಿದೆ. ಬೃಹದಾಕಾರದ ಅಲೆಗಳು ಸೀ ವಾಕ್ ಹಾದಿಯೊಳಕ್ಕೂ ನೆಗೆದು ಬಂದು ಅಪ್ಪಳಿಸು ತ್ತಿದೆ. ಇದರಿಂದ ಭಾರೀ ಸಂಖ್ಯೆಯಲ್ಲಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿರುವ ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ಇರಬೇಕಾದ ಅಗತ್ಯವಿದೆ.
ಕೋಡಿಯ ಅರಬಿಸಮುದ್ರ ತೀರದಲ್ಲಿ ಅಳವಡಿಸಿದ ಟೆಟ್ರಾಪೋಡ್ಗಳಿಗೆ ದೊಡ್ಡ ಗಾತ್ರದ ಅಲೆಗಳು ಹೊಡೆಯುವ ದೃಶ್ಯ ಕಂಡುಬಂದಿದೆ. ವಾರಾಂತ್ಯ ಹಾಗೂ ರಜೆಗಳ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಲ್ಲಿಗೆ ಆಗಮಿಸುತ್ತಾರೆ. ಸೀವಾಕ್ನಲ್ಲಿ ನಡೆಯುತ್ತಾ ಸಮುದ್ರದ ರುದ್ರರಮಣೀಯ ದೃಶ್ಯವನ್ನು ನೋಡುತ್ತಾ ಮೈಮರೆಯುತ್ತಾರೆ.
ಮಳೆಯಿಲ್ಲದಿದ್ದರೆ ನಿತ್ಯ ಸಂಜೆ ಸೂರ್ಯಾಸ್ತದ ವೇಳೆ ನೂರಾರು ಮಂದಿ ಸೀ ವಾಕ್ ಪ್ರದೇಶದತ್ತ ಸೂರ್ಯಾಸ್ತ ವೀಕ್ಷಣೆ ಹಾಗೂ ವಾಕಿಂಗ್ಗೆ ಆಗಮಿಸುತ್ತಾರೆ. ಆದರೆ ಹೊರಜಿಲ್ಲೆ ಹಾಗೂ ಇತರ ಪ್ರದೇಶಗಳಿಂದ ಬರುವ ಪ್ರವಾಸಿ ಗರಿಗೆ ಅಲೆಗಳ ಶಕ್ತಿ, ಸಾಮರ್ಥ್ಯಗಳ ಅರಿವು ಇರುವುದಿಲ್ಲ. ಅಲೆಗಳ ರಭಸ ತಿಳಿದಿರುವುದಿಲ್ಲ. ಫೋಟೊ ಹಾಗೂ ಸೆಲ್ಫಿಗಾಗಿ ಇಲ್ಲಿ ನಿಲ್ಲುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.
ಅಲ್ಲದೇ ತೀರದಲ್ಲಿ ಅಳವಡಿಸಿರುವ ಟೆಟ್ರಾಪೋಡ್ಗಳು ಮಳೆಯ ಪಾಚಿಗೆ ಜಾರುತ್ತಿದ್ದು ಸೀ ವಾಕ್ ಅಂತ್ಯದ ತಡೆ ಗೋಡೆಯ ಎರಡು ಬದಿಗಳು ಬಿರುಕುಬಿಟ್ಟಿದೆ. ಈ ಬಗ್ಗೆ ಸಂಬಂದಪಟ್ಟವರು ಅಗತ್ಯ ಕ್ರಮವಹಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.






