ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟ : ಉತ್ತರ ಕನ್ನಡ ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ, ನ.14: ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಕಾರವಾರದ ಉತ್ತರ ಕನ್ನಡ ಜಿಲ್ಲಾ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮೂರು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲೆಗಳ ಗೃಹರಕ್ಷಕ ಕ್ರೀಡಾಪಟು ಗಳು ಭಾಗವಹಿಸಿದ್ದರು.
ಪುರುಷರ ವಿಭಾಗದ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಉಡುಪಿಯ ರಾಜೇಶ್ ಅಂಬಿಗ ಅವರು ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದರೆ, ಮಹಿಳೆಯರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶೃತಿ ಸಾವಂತ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಪುರುಷರ ವಿಭಾಗದ ಗ್ರೂಪ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ತಂಡದ ಸಂದೀಪ್ ಎಚ್.ಪಿ. ಚಾಂಪಿಯನ್ ಪ್ರಶಸ್ತಿ ಪಡೆದರು.
ಓಟದ ಸ್ಪರ್ಧೆಗಳಲ್ಲಿ ರಾಜೇಶ್ ಅಂಬಿಗ ಹಾಗೂ ಶೃತಿ ಸಾವಂತ ಅವರೇ ಎಲ್ಲಾ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದಿದ್ದರು. ಪುರುಷರ ವಾಲಿಬಾಲ್ ನಲ್ಲಿ ಚಿಕ್ಕಮಗಳೂರು, ಕಬಡ್ಡಿಯಲ್ಲಿ ಕಾರವಾರ ತಂಡಗಳು ಮೊದಲ ಸ್ಥಾನ ಪಡೆದವು. ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಉತ್ತರ ಕನ್ನಡ ಜಿಲ್ಲೆ ಆಗೂ ಮಹಿಳೆಯರ ವಿಬಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನಿಗಳಾದವು.
ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಗೃಹರಕ್ಷಕದಳವು ಪೊಲೀಸ್ ಇಲಾಖೆಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ಕಾಲದಲ್ಲಿ ಗೃಹರಕ್ಷಕದಳ ತನ್ನ ಕಾರ್ಯವೈಖರಿ ಮೂಲಕ ಜನರಿಂದ ಮೆಚ್ಚುಗೆ ಪಡೆದಿದೆ. ಗೃಹರಕ್ಷಕದಳದ ಸಿಬ್ಬಂದಿಗಳು ಪೊಲೀಸರ ಮಾದರಿಯಲ್ಲೇ ಸೇವೆ ನೀಡಿ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮುಖ್ಯ ಅತಿಥಿಯಾಗಿ ಬಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾಜದಲ್ಲಿ ತುರ್ತು ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ರೈ, ವಿವಿಧ ಜಿಲ್ಲೆಗಳ ಸಮಾದೇಷ್ಟರು ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ವಂದಿಸಿದರು. ಬ್ರಹ್ಮಾವರ ಘಟಕದ ಪಿಎಲ್ಸಿ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.







