ನನ್ನ ಕುಟುಂಬವನ್ನು ಸರ್ವನಾಶ ಮಾಡಿದ ಕ್ರೂರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು: ನೂರ್ ಮುಹಮ್ಮದ್ ಒತ್ತಾಯ

ನೂರ್ ಮುಹಮ್ಮದ್
ಉಡುಪಿ: ‘‘ನನ್ನ ಕುಟುಂಬವನ್ನು ಸರ್ವನಾಶ ಮಾಡಿದ ಕ್ರೂರಿಗೆ ಈ ಭೂಮಿ ಮೇಲೆ ಬದುಕುವ ಯಾವುದೇ ಅರ್ಹತೆ ಇಲ್ಲ. ಆತ ಮನುಷ್ಯನೇ ಅಲ್ಲ, ಮೃಗ. ನನ್ನ ಮಗಳಿಗೆ ಮಾಡಿದ ರೀತಿ ಮುಂದೆ ಆತ ಬೇರೆ ಯಾವ ಹೆಣ್ಣು ಮಕ್ಕಳಿಗೂ ಮಾಡಬಾರದು. ಆದುದರಿಂದ ತ್ವರಿತ ನ್ಯಾಯಾಲಯ ಸ್ಥಾಪಿಸಿ ಕೂಡಲೇ ಆತನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು’’ ಎಂದು ನೂರ್ ಮುಹಮ್ಮದ್ ಒತ್ತಾಯಿಸಿದ್ದಾರೆ.
ಪತ್ನಿ, ಮೂವರು ಮಕ್ಕಳನ್ನು ಕಳೆದುಕೊಂಡಿರುವ ಅವರು ನೇಜಾರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ‘ವಾರ್ತಾಭಾರತಿ’ ಜೊತೆ ಮಾತನಾಡಿದರು.
ಕೊಲೆ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸರು ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅವರ ಕಾರ್ಯದಲ್ಲಿ ನನಗೆ ತುಂಬಾ ತೃಪ್ತಿ ಇದೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸಹಪಾಠಿ ನೆಲೆಯಲ್ಲಿ ಪರಿಚಯ
‘ನನ್ನ ಮಗಳು ಐನಾಝ್ ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಹಲವು ಬಾರಿ ಹೊರ ದೇಶಕ್ಕೆ ಹೋಗಿ ಬಂದಿದ್ದಾಳೆ. ಅವಳ ಜೊತೆ ಹಿರಿಯ ಸಿಬ್ಬಂದಿ ಕೂಡ ಇರುತ್ತಾರೆ. ಹಾಗೆ ಆಕೆ ಸೀನಿಯರ್ ಕ್ರ್ಯೂ ಆಗಿದ್ದ ಪ್ರವೀಣ್ ಜೊತೆ ಎರಡು ಮೂರು ಬಾರಿ ಪ್ರಯಾಣ ಮಾಡಿದ್ದಾಳೆ. ಅದು ಬಿಟ್ಟು ಅವರಿಗೆ ಬೇರೆ ಯಾವುದೇ ಸಂಪರ್ಕ ಇರಲಿಲ್ಲ’ ಎಂದು ಅವರು ತಿಳಿಸಿದರು.
‘ನನ್ನ ಮಗಳು ಕೆಲಸ ಮಾಡುವ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯು ಈ ದುರಂತ ಸಂಭವಿಸಿದರೂ ಅವರ ಸಿಬ್ಬಂದಿಯ ತಂದೆ ನೆಲೆಯಲ್ಲಿ ಕರೆ ಮಾಡಿಲ್ಲ. ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಮಿನಲ್ ಮನಸ್ಥಿತಿಯವನು
‘ಈ ರೀತಿಯ ಮೃಗೀಯ ಮನಸ್ಥಿತಿಯವರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನವರು ಹೇಗೆ ಕೆಲಸ ಕೊಡುತ್ತಾರೆ. ಇವ ಪಕ್ಕ ಕ್ರಿಮಿನಲ್ ಮನಸ್ಥಿತಿಯವನು. ಆತನ ಯಾವುದೇ ಪೂರ್ವಪರ ವಿಚಾರಿಸದೆ ಅವನಿಗೆ ಹೇಗೆ ಕೆಲಸ ಕೊಟ್ಟಿದ್ದಾರೆ ಎಂದು ನೂರ್ ಮುಹಮ್ಮದ್ ಪ್ರಶ್ನಿಸಿದರು.
ಗಗನಸಖಿ ಆಕೆಯ ಕನಸು
ನಮ್ಮ ಸಮುದಾಯದಲ್ಲಿ ಗಗನಸಖಿಯಾಗಿ ಕೆಲಸ ಮಾಡುವುದು ಕಡಿಮೆ. ಆದರೆ ನಾನು ಮನೆಯಲ್ಲಿ ವಿರೋಧ ಇದ್ದರೂ ಧೈರ್ಯ ತೆಗೆದುಕೊಂಡು ನನ್ನ ಮಗಳ ಆಸೆಗಾಗಿ ಗಗನಸಖಿ ಕೆಲಸಕ್ಕೆ ಸೇರುವಂತೆ ಪ್ರೋತ್ಸಾಹ ನೀಡಿದೆ ಎಂದು ನೂರ್ ಮುಹಮ್ಮದ್ ತಿಳಿಸಿದರು.
ಸೌದಿಯಲ್ಲಿ ನನ್ನ ಜೊತೆ ಇರುವಾಗ ವಿಮಾನದಲ್ಲಿ ಊರಿಗೆ ಬಂದು ಹೋಗುತ್ತಿದ್ದಾಗ ಐನಾಝ್, ನಾನು ಕೂಡ ಇದೇ ಕೆಲಸ ಮಾಡುತ್ತೇನೆ, ನನಗೆ ನೀವು ಅವಕಾಶ ನೀಡಬೇಕು ಎಂದು ಹೇಳಿದ್ದಳು. ಅದನ್ನು ಸವಾಲು ಆಗಿ ತೆಗೆದುಕೊಂಡು ಉಡುಪಿ ಎಂಜಿಎಂನಲ್ಲಿ ದ್ವಿತೀಯ ಬಿಕಾಂ ಕಲಿಯುತ್ತಿದ್ದಾಗ ಆ ಕೆಲಸ ಗಿಟ್ಟಿಸಿಕೊಂಡಿದ್ದಳು. ವಿದ್ಯಾಭ್ಯಾಸ ಅರ್ಧಕ್ಕೆ ಮುಗಿಸಿ ಕೆಲಸಕ್ಕೆ ಸೇರಿದಳು. ಕಳೆದ ಒಂದು ವರ್ಷದಿಂದ ಅವಳು ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಳು ಎಂದು ಅವರು ಹೇಳಿದರು.
ಮದುವೆ ಮಾಡಲು ಯೋಚಿಸಿದ್ದೆ
2024ರ ಫ್ರೆಬವರಿಯಲ್ಲಿ ನನ್ನ ದೊಡ್ಡ ಮಗ ಅಸಾದ್ ಮತ್ತು ದೊಡ್ಡ ಮಗಳು ಅಫ್ನಾನ್ಗೆ ಮದುವೆ ಮಾಡುವ ಬಗ್ಗೆ ಪತ್ನಿ ಜೊತೆ ಮಾತುಕತೆ ಮಾಡಿದ್ದೆ. ಆ ಬಗ್ಗೆ ಇವರಿಗೆ ನೀನೆ ಹುಡುಗ ಮತ್ತು ಹುಡುಗಿಯನ್ನು ನೋಡಬೇಕು ಎಂದು ಹೇಳಿದ್ದೆ. ಹಾಗೆ ನನ್ನ ಪತ್ನಿ ನೋಡಿ ಇಟ್ಟಿದ್ದಳು. ಅದನ್ನು ನಮ್ಮ ಸಂಬಂಧಿಕರ ಬಳಿ ಕೇಳಿ ಅಂತಿಮ ಮಾಡಬೇಕು ಎಂದು ನಾವು ಇದ್ದೆವು ಎಂದು ಅವರು ಹೇಳಿದರು.
ಮದುವೆ ಹಿನ್ನೆಲೆಯಲ್ಲಿ ಮನೆಗೆ ಪೈಂಟ್ ಮಾಡಲು ನಾನು 50 ಸಾವಿರ ರೂ. ಕೂಡ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಈ ಎಲ್ಲ ವಿಚಾರವನ್ನು ಶನಿವಾರ ರಾತ್ರಿ ಪತ್ನಿ ಜೊತೆ ಮಾತನಾಡಿದ್ದೆ. ಬೆಳಗ್ಗೆ ಈ ದುರ್ಘಟನೆ ನಡೆದು ಹೋಗಿದೆ ಎಂದು ನೋವಿನಿಂದ ಹೇಳಿದರು.
ರವಿವಾರ ಬೆಳಗ್ಗೆ ನಾನು ಮನೆಗೆ ಕರೆ ಮಾಡಿದ್ದೆ. ಆದರೆ ಅವರು ಯಾರು ಕೂಡ ಕರೆ ಸ್ವೀಕರಿಸಲಿಲ್ಲ. ಯಾಕೆಂದರೆ ಇಲ್ಲಿ ಆಗ ಅವರೆಲ್ಲ ಕೊಲೆಯಾಗಿದ್ದಿರ ಬೇಕು. ಮತ್ತೆ ನಾನು ಕೆಲಸ ಮುಗಿಸಿ ಬಂದು ನೋಡಿದಾಗ ನನ್ನ ಮೊಬೈಲ್ನಲ್ಲಿ ಊರಿನಿಂದ 28 ಮಿಸ್ಕಾಲ್ ಇತ್ತು. ಕರೆ ಮಾಡಿ ಕೇಳಿದಾಗ ಈ ಶಾಕಿಂಗ್ ಸುದ್ದಿ ಕಿವಿಗೆ ಬಿತ್ತು. ಮೊದಲು ನಾನು ನಂಬಿಲ್ಲ. ಇದನ್ನು ಕನಸಲ್ಲೂ ಎನಿಸಲು ಸಾಧ್ಯವಿಲ್ಲ. ನಾನು ಅಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದೆ ಎಂದು ಅವರು ತಿಳಿಸಿದರು.
ಆರೋಪಿ ಹಿನ್ನೆಲೆ ಬಗ್ಗೆ ತನಿಖೆಯಾಗಲಿ
ಆರೋಪಿ ಪ್ರವೀಣ್ ಹಿನ್ನೆಲೆ ಬಗ್ಗೆ ಪೊಲೀಸರು ಸರಿಯಾಗಿ ಸಮಗ್ರವಾಗಿ ತನಿಖೆ ನಡೆಸಬೇಕು. ಬೇರೆ ಹೆಣ್ಣು ಮಕ್ಕಳಿಗೆ ಏನೆಲ್ಲ ಮಾಡಿದ್ದಾನೆ ಎಂಬುದನ್ನು ವಿಚಾರಣೆ ಮಾಡಬೇಕು. ಅವನು ಮನುಷನಲ್ಲ ಕ್ರೂರಿ. ಈ ಹಿಂದೆ ಕೂಡ ಕೊಲೆ ಮಾಡಿರಬಹುದು. ಇಂತವರಿಗೆ ಕೆಲಸ ಕೊಟ್ಟ ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಇದು ದೊಡ್ಡ ಶೇಮ್ ಎಂದು ನೂರ್ ಮುಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮನಿಗೆ ಶೂ ತಂದಿದ್ದಳು
ಕೊನೆಯಾಗುವ ಮುನ್ನಾ ದಿನ ಶನಿವಾರ ಐನಾಝ್ ಅಬುಧಾಬಿಯಿಂದ ಬರುವಾಗ ತಮ್ಮನಿಗಾಗಿ ಶೂ, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗನ ಹುಟ್ಟುಹಬ್ಬಕ್ಕಾಗಿ ಸಿಹಿ ತಿಂಡಿ ಮತ್ತು ಬ್ಯಾಗ್ ತೆಗೆದುಕೊಂಡು ಬಂದಿದ್ದಳು. ಅದನ್ನು ಕೊಡುವುದಕ್ಕಾಗಿಯೇ ಆಕೆ ಶನಿವಾರ ರಾತ್ರಿ ನೇಜಾರು ಮನೆಗೆ ಬಂದಿದ್ದಾಳೆ. ರವಿವಾರ ರಾತ್ರಿ 8ಕ್ಕೆ ದುಬೈ ಹೋಗಲಿಕ್ಕೆ ಇದ್ದುದರಿಂದ ಮನೆಯಿಂದ ಬೆಳಗ್ಗೆ 11ಗಂಟೆಗೆ ಹೋಗಬೇಕು ಎಂದು ಹೇಳಿದ್ದಳು. ಇದುವೇ ಆಕೆ ನನಗೆ ನೀಡಿದ ಕೊನೆಯ ಮಾತು ಎಂದು ನೂರ್ ಮುಹಮ್ಮದ್ ಗದ್ಗರಿತರಾಗಿ ನುಡಿದರು.
‘ಎಲ್ಲ ಕಡೆ ಓಡಾಡುವ ನಮ್ಮ ಸ್ಥಳೀಯ ಸಂಸದರು ನಮಗೆ ಒಂದು ಸಾಂತ್ವನದ ಮಾತು ಕೂಡ ಹೇಳಿಲ್ಲ. ನಾವು ನಮ್ಮವರನ್ನು ಕಳೆದುಕೊಂಡು ಐದು ದಿನಗಳಾದರೂ ಒಂದು ಹೇಳಿಕೆ ಕೂಡ ನೀಡಿಲ್ಲ. ಮನೆಯಲ್ಲಿ ಏನಾಗಿದೆ, ನನ್ನಿಂದ ಏನಾದರೂ ಆಗಬೇಕೇ ಎಂದು ಒಂದು ಮಾತು ಕೇಳಿಲ್ಲ. ಕನಿಷ್ಠ ಸಾಂತ್ವನ ಆದರೂ ಹೇಳುತ್ತಿದ್ದರೆ ಅವರು ನಮ್ಮ ಪ್ರೀತಿಗೆ ಪಾತ್ರರಾಗಿದ್ದರು’
-ನೂರ್ ಮುಹಮ್ಮದ್







