ಕರಾವಳಿಯಲ್ಲಿ ಗಾಳಿ-ಮಳೆಯ ಮುನ್ಸೂಚನೆ; ಮೀನುಗಾರರಿಗೆ ಎಚ್ಚರಿಕೆ

ಉಡುಪಿ: ಮುಂದಿನ ಎರಡು ದಿನಗಳ ಕಾಲ ಪಶ್ಚಿಮ ಕರಾವಳಿ ಪ್ರಕ್ಷುಬ್ಧವಾಗಿರಲಿದ್ದು, ಕೇರಳ, ಕರ್ನಾಟಕದ ಕರಾವಳಿ ತೀರದಲ್ಲಿ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೈಂದೂರು ತಾಲೂಕಿನಾದ್ಯಂತ ಗಾಳಿ ತನ್ನ ಪ್ರತಾಪವನ್ನು ತೋರಿಸಿದೆ. ಯಡ್ತರೆ ಗ್ರಾಮದಲ್ಲಿ ಪ್ರದೀಪ್ ಎಂಬವ ರಿಗೆ ಸೇರಿದ ಕೋಳಿ ಪಾರಂನ ಚಾವಣಿ ಬೀಸಿದ ಬಿರುಗಾಳಿಗೆ ನೆಲಕಚ್ಚಿದ್ದು, ಎಂಟು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಅಲ್ಲದೇ ಕುಂದಾಪುರ, ಬೈಂದೂರುಗಳಲ್ಲಿ ವಿದ್ಯುತ್‌ನ ವೋಲ್ಟೇಜ್ ಸಮಸ್ಯೆಯಿಂದಾಗಿ ಸಾಕಷ್ಟು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟುಹೋಗಿರುವ ಬಗ್ಗೆ ಮಾಹಿತಿಗಳು ಬಂದಿವೆ.
ರವಿವಾರ ಸಂಜೆ ಬೀಸಿದ ಬಾರೀ ಗಾಳಿಗೆ ಕಾರ್ಕಳ ಹಾಗೂ ಕುಂದಾಪುರ ತಾಲೂಕಿನಾದ್ಯಂತ ಅನೇಕ ಮನೆಗಳಿಗೆ ಹಾನಿಯಾಗಿರುವ ವರದಿ ಬಂದಿದೆ. ಜಿಲ್ಲೆಯಲ್ಲಿ 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಸುಮಾರು ಆರು ಲಕ್ಷ ರೂ. ಹಾಗೂ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ತೋಟಗಾರಿಕಾ ಬೆಳೆಗಳಿಗೆ ಒಂದೂವರೆ ಲಕ್ಷ ರೂ.ಗಳಷ್ಟು ಸೊತ್ತುಗಳಿಗೆ ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ಬಂದಿವೆ.
ಮಳೆಯ ಪ್ರಮಾಣ ತೀರಾ ಕಡಿಮೆ ಇದ್ದರೂ, ಮಳೆಯೊಂದಿಗೆ ವೇಗದ ಗಾಳಿ ಬೀಸಿ ಕೆಲವು ಗ್ರಾಮಗಳಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಕಾರ್ಕಳದ ನಲ್ಲೂರು ಗ್ರಾಮದ ಸಂತೋಷ್, ಹರಿಶ್ಟಂದ್ರ, ಶೀನ ನಲ್ಕೆ, ಸೀತು ಪೂಜಾರ್ತಿ, ಕೆ.ಲಕ್ಷ್ಮೀಕಾಂತ ಗೋರೆ ಹಾಗೂ ನಾಥು ನಲ್ಕೆ ಅವರ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು 10ಸಾವಿರ ರೂ.ಗಳಿಂದ 40 ಸಾವಿರ ರೂ.ಗಳವರೆಗೆ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ಮೂರು ಹಾಗೂ ನಲ್ಲೂರು ಗ್ರಾಮದಲ್ಲಿ 16 ಮನೆಗಳಿಗೆ ಸಾಧಾರಣ ದಿಂದ ಬಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇನ್ನುಳಿದಂತೆ ಕುಂದಾಪುರ ತಾಲೂಕಿನ ಬಸ್ರೂರು, ಬಳ್ಕೂರು, ಹಾರ್ದಳ್ಳಿ ಮಂಡಳ್ಳಿ, ಕುಂಭಾಶಿ, ಹಕ್ಲಾಡಿ, ಕೋಟೇಶ್ವರ ಗ್ರಾಮದಲ್ಲಿ ಮನೆಗಳ ಮೇಲೆ ಮರ ಬಿದ್ದು, ಅಥವಾ ಗಾಳಿ-ಮಳೆಗೆ ಭಾಗಶ: ಹಾನಿಯಾಗಿರುವ ಮಾಹಿತಿಗಳು ಇಲ್ಲಿಗೆ ತಲುಪಿವೆ.
ಬಸ್ರೂರು ಗ್ರಾಮದ ರಾಧಾ ಪೂಜಾರ್ತಿ ಅವರ ಮನೆಗೆ 80ಸಾವಿರ ರೂ., ಕುಂಭಾಷಿಯ ಕೃಷ್ಣ ಎಂಬವರ ಮನೆಗೆ 75,000ರೂ., ಕಾರ್ಕಳ ನಲ್ಲೂರಿನ ಸೇಸಪ್ಪ ಎಂಬವರ ಮನೆಗೆ 50,000ರೂ., ಕೆರ್ವಾಶೆಯ ವಿಶ್ವನಾಥ ನಾಯ್ಕ ಅವರ ಮನೆಗೆ 50,000ರೂ., ಕೆರ್ವಾಶೆಯ ಸಂಜೀವ ಶೆಟ್ಟಿ ಅವರ ಮನೆಗೆ 35,000ರೂ., ಬಳ್ಕೂರು ಗ್ರಾಮದ ಶೇಖರ ಆಚಾರಿ, ಹಕ್ಲಾಡಿಯ ಸುಮತಿ ಶೆಡ್ತಿ ಹಾಗೂ ಕೋಟೇಶ್ವರದ ಮಂಜ ಪೂಜಾರಿ ಮನೆಗೆ ತಲಾ 30,000ರೂ. ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.






