ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತ್ಯು ಆರೋಪ: ಸರ್ಜನ್ ವರದಿಯಂತೆ ಪ್ರಕರಣ ದಾಖಲು

ಕಾರ್ಕಳ, ಡಿ.30: ವೈದ್ಯರ ನಿರ್ಲಕ್ಷ್ಯದ ಕುರಿತು ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಂತೆ ಕಾರ್ಕಳ ಸ್ಪಂದನಾ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣಕ್ಕೆ ಝುಬೈದ(52) ಎಂಬವರು ಮೇ 10ರಂದು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಡ್ರಿಪ್ಸ್ ಹಾಕಿದರು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಝುಬೈದ ಅವರ ಮಗಳು ಮುಬೀನಾ ಕೇಳಿಕೊಂಡರು, ವೈದ್ಯರು ಬಂದಿರುವುದಿಲ್ಲ, ನಂತರ ಬಂದ ಡಾ.ನಾಗರತ್ನ ಕೂಡಲೇ ಆಪರೇಷನ್ ಮಾಡಬೇಕು, ಝುಬೇದ ಅವರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದರು.
ನಂತರ ಅವರನ್ನು ಆಸ್ಪತ್ರೆಯ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದು, ನಂತರ ಡಾ.ನಾಗರತ್ನ ಡಾ.ರೆಹಮತ್ತುಲ್ಲಾ ಹಾಗೂ ಡಾ.ತುಷಾರ ಆಪರೇಷನ್ ಥಿಯೇಟರ್ ಒಳಗಡೆ ಹೋಗಿದ್ದು, ನಂತರ ಹೊರಗಡೆ ಬಂದ ಡಾ.ರೆಹಮತ್ತುಲ್ಲಾ, ಝುಬೈದ ಮೃತಪಟ್ಟಿರುವುದಾಗಿ ತಿಳಿಸಿದರು. ಝುಬೈದ ಅವರಿಗೆ ವೈದ್ಯಾಧಿಕಾರಿಯವರು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಹಾಗೂ ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷತನದಿಂದ ಆಪರೇಷನ್ ಮಾಡಿರುವುದು ಎಂದು ಆರೋಪಿಸಿ ಮುಬೀನಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಮೃತ ಝುಬೈದ ಅವರ ಮರಣದ ಬಗ್ಗೆ ಹಾಗೂ ವೈಧ್ಯಾಧಿಕಾರಿಯವರ ನಿರ್ಲಕ್ಷತೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಕೋರಿಕೆ ಪತ್ರ ನೀಡಿದ್ದು ಈ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ ಪರಿಶೀಲನೆ ನಡೆಸಿ ವರದಿ ನೀಡಿದ್ದರು.
ಈ ವರದಿಯಲ್ಲಿ ಆರೋಪಿ ವೈಧ್ಯಾಧಿಕಾರಿಗಳಾದ ಡಾ.ನಾಗರತ್ನ ಡಾ.ರೆಹಮತ್ತುಲ್ಲಾ ಹಾಗೂ ಡಾ.ತುಷಾರ ಎಂಬವರು ಆಪರೇಶನ್ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಾಕಷ್ಟು ಕಾಲಾವಕಾಶ ಇದ್ದರೂ ರೋಗಿಯ ಸ್ಥಿತಿಗತಿಯ ಬಗ್ಗೆ ರೋಗಿಗೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೇ ಇರುವುದು ಕಂಡು ಬಂದಿದೆ. ಅದೇ ರೀತಿ ರೋಗಿ ಆಪರೇಷನ್ ಆಗುವಾಗಲೇ ಮೃತಪಟ್ಟಿ ರುವುದು ವೈದ್ಯಾಧಿಕಾರಿಗಳ ಲಿಖಿತ ಹೇಳಿಕೆಯಿಂದ ದೃಡಪಟ್ಟಿದೆ. ಅದರಂತೆ ಶಸ್ತ್ರ ಚಿಕಿತ್ಸೆ ನೀಡಿದ ವೈದ್ಯರ ನಿರ್ಲಕ್ಷತನ ಮೇಲ್ಮೊಟಕ್ಕೆ ಕಂಡು ಬಂದಿರುವುದು ಈ ವರದಿ ಅಭಿಪ್ರಾಯ ಪಟ್ಟಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.







