ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯ ಬ್ಯಾಗ್ ಕಳವು

ಉಡುಪಿ, ಸೆ.11: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ನಗ ನಗದು ಸಹಿತ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಘಟನೆ ಸೆ.10ರಂದು ಸಂಜೆ ಉಡುಪಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಗೀತಾ ಬಾಯಿ(59) ಎಂಬವರು ಮಂಗಳೂರಿಗೆ ಹೋಗಲು ಉಡುಪಿಯ ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿ ಕುಳಿತಿದ್ದು, ಪಕ್ಕದ ಖಾಲಿ ಸೀಟಿನಲ್ಲಿ ಅವರ ತಂಗಿ ಕುಳಿತುಕೊಳ್ಳಲು ವ್ಯಾನಿಟಿ ಬ್ಯಾಗನ್ನು ಇಟ್ಟಿದ್ದರು.
ಆ ವೇಳೆ ಬಸ್ಸಿನಲ್ಲಿ ಸುಮಾರು 30-32 ಪ್ರಾಯದ ಅಪರಿಚಿತ ಮಹಿಳೆ ವ್ಯಾನಿಟಿ ಬ್ಯಾಗ್ ಮೇಲೆ ಬಿದ್ದಂತೆ ನಟನೆ ಮಾಡಿ, ಸೀಟಿನ ಕೆಳಭಾಗದಲ್ಲಿ ಕುಳಿತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ಬಸ್ ಕಟಪಾಡಿ ದಾಟಿದ ನಂತರ ಬ್ಯಾಗನ್ನು ತೆರೆದು ನೋಡಿದಾಗ ಅದರಲ್ಲಿದ್ದ ಪರ್ಸ್ ಕಳವಾಗಿರುವುದು ಕಂಡುಬಂತು.
ಅದರಲ್ಲಿ 40,000ರೂ. ನಗದು, ಹಳೆಯ ಚಿನ್ನದ ಬೆಂಡೋಲೆ 1 ಜೊತೆ, ಕಲ್ಲಿನ ಚಿನ್ನದ ಮೂಗುಬೊಟ್ಟು ಹಾಗೂ 10,000ರೂ. ಮೌಲ್ಯದ ಓಮನ್ ದೇಶದ ರಿಯಾಲ್ ಕರೆನ್ಸಿ ನೋಟುಗಳಿದ್ದವು. ಕಂಡಕ್ಟರ್ ಬಳಿ ವಿಚಾರಿಸಿದಾಗ, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಉಡುಪಿ ಹಳೆ ತಾಲೂಕು ಕಚೇರಿ ಬಳಿ ಬಸ್ಸಿನಿಂದ ಇಳಿದು ಹೋಗಿರುವುದಾಗಿ ತಿಳಿಸಿ ದ್ದಾರೆ. ಈ ಮಹಿಳೆ ಯರೇ ಬ್ಯಾಗ್ ಕಳವು ಮಾಡಿರುವ ಬಗ್ಗೆ ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





