ಮಹಿಳೆಯ ಗರ್ಭಕೋಶದಲ್ಲಿ 8 ಕೆ.ಜಿ. ತೂಕದ ಗಡ್ಡೆ| ಉಡುಪಿ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ತಜ್ಞರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಉಡುಪಿ: ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮಹತ್ವದ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯ ಗರ್ಭಕೋಶದಿಂದ 8ಕೆ.ಜಿ. ತೂಕದ ಗರ್ಭಕೋಶದ ಗಡ್ಡೆ(ಫೈಬಾಯ್ಡ್ ಯೂಟರಸ್)ಯನ್ನು ಹೊರತೆಗೆಯುವಲ್ಲಿ ಯಸ್ವಿಯಾಗಿದೆ.
ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ.ಶಶಾಂಕ್ ಕಿಣಿ, ಡಾ.ಜಾಸ್ಮಿನ್, ಡಾ.ಕವಿತಾ, ಡಾ.ಅಮೃತಾಂಶ್ ತಂಡ ಮತ್ತು ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ, ಡಾ.ರಾಜ್‌ಗೋಪಾಲ್ ಭಂಡಾರಿ ಹಾಗೂ ಶುಶ್ರೂಷಕಾಧಿ ಕಾರಿ ರಕ್ಷಿತಾ, ಓ.ಟಿ. ಸಹಾಯಕಿ ಸಂಗೀತ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರೋಗಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.
44 ವರ್ಷದ ಮಹಿಳೆ ಕಳೆದ ಒಂದು ವರ್ಷದಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಖಾಸಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು. ನೋವು ಕಡಿಮೆಯಾಗದ ಕಾರಣ ಈ ಮಹಿಳೆಯು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ತಜ್ಞ ವೈದ್ಯರು ಮಹಿಳೆಯನ್ನು ತಪಾಸಣೆ ಮಾಡಿಸಿದಾಗ ರೋಗಿಯ ಹೊಟ್ಟೆಯು (ಒಂದು ಮಕ್ಕಳ ಗಾತ್ರದ) ಗರ್ಭಿಣಿಯ ಹೊಟ್ಟೆಯ ರೀತಿಯಲ್ಲಿದ್ದು ನೀರು ತುಂಬಿದ ಗೆಡ್ಡೆಯ ಸ್ಥಿತಿಯಲ್ಲಿ ಕಂಡುಬಂತು.
ನಂತರ ಹೊಟ್ಟೆಯ ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಬಳಿಕ ಈ ಶಸ್ತ್ರಚಿಕಿತ್ಸೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಸಬೇಕೆಂದು ನಿರ್ಧರಿಸಿದ್ದು ತಜ್ಞ ವೈದ್ಯರ ತಂಡ ಜಿಲ್ಲಾಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಅಶೋಕ್ ಅವರಲ್ಲಿ ಚರ್ಚಿಸಿ ಅವರ ಸಲಹೆಯಂತೆ ಮೇ 25ರಂದು ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿತು.
ದೊಡ್ಡ ಗಾತ್ರದ ಗರ್ಭಕೋಶದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಇಡೀ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿಗೆ ಜಿಲ್ಲಾ ಸರ್ಜನ್ ಡಾ.ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಆಸ್ಪತ್ರೆಯ ಎಲ್ಲಾ ವೈದ್ಯರಿಗೆ ಹಾಗೂ ಆಸ್ಪತ್ರೆಯ ಮುಖ್ಯಸ್ಥರಾದ ಜಿಲ್ಲಾ ಸರ್ಜನ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಯಾವುದೇ ತೊಂದರೆ ಇಲ್ಲದೆ ವೈದ್ಯರ ತಂಡ ನಮಗೆ ಚಿಕಿತ್ಸೆ ನಡೆಸಿದೆ. ನಮ್ಮಂತಹ ಬಡವರಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿ‘
-ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆ






