ಮಹಿಳೆಯರಿಂದ ಗ್ರಾಮೀಣ ಬದುಕು ಸುಸ್ಥಿರ: ಡಾ.ಕೃಷ್ಣ ಕೊತ್ತಾಯ

ಉಡುಪಿ, ಡಿ.19: ಇಂದು ನಮ್ಮ ಬದುಕು ಸುಸ್ಥಿರವಾಗಿಲ್ಲ. ಗ್ರಾಮೀಣ ಬದುಕು ಸುಸ್ಥಿರ ಆಗಿರಲು ಮಹಿಳೆ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಮಹಿಳೆಯರ ಪೋಷಣೆ ಹಾಗೂ ಪ್ರಕೃತಿಯ ರಕ್ಷಣೆ ಆಗಬೇಕು. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಮಾಡಿಕೊಡಬೇಕು ಎಂದು ಗಾಂಧಿ ಚಿಂತಕ, ಪೂರ್ಣಪ್ರಜ್ಞ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್‌ನ ನಿರ್ದೇಶಕ ಡಾ.ಕೃಷ್ಣ ಕೊತ್ತಾಯ ಹೇಳಿದ್ದಾರೆ.
ಸಾಗರದ ಹೆಗ್ಗೋಡು- ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ನಾವು ಯಂತ್ರಗಳ ಯುಗದಲ್ಲಿದ್ದೇವೆ. ಕೃತಕ ಬುದ್ಧಿಮತ್ತೆಗಾಗಿ ನಮ್ಮ ಎಲ್ಲ ಬುದ್ದಿಮತ್ತೆ ಮಾಯವಾಗುತ್ತಿದೆ. ಆದರೆ ನಮ್ಮ ಮಹಿಳೆಯರಿಗೆ ಯಾವುದೇ ಕೃತಕ ಬುದ್ದಿಮತ್ತೆಯ ಅಗತ್ಯ ಇಲ್ಲ. ಅವರ ತಮ್ಮ ಪರಿಶ್ರಮದಿಂದ ಯಾವುದೇ ಪುರುಷರಿಗೆ ಕಡಿಮೆ ಇಲ್ಲದಂತೆ ಮುಂದುವರೆ ಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ನಿರ್ದೇಶಕಿ ಡಾ.ಎಚ್.ಎಸ್.ಶುಭಾ ಮಾತನಾಡಿ, ಚರಕ ಸಂಸ್ಥೆಯ ಒಂದೊಂದು ಉತ್ಪನ್ನಗಳ ಹಿಂದೆ ಒಂದೊಂದು ಕಥೆಗಳನ್ನು ಹೇಳುತ್ತದೆ. ಮನೆ, ಭೂಮಿ, ಜೀವನ ಶೈಲಿ, ಸುಖ, ದುಃಖಗಳು ಅದರ ಹಿಂದೆ ಇದೆ. ಆದುದರಿಂದ ಈ ಉತ್ಪನ್ನಗಳು ತುಂಬಾ ಮೌಲ್ಯಯುತವಾಗಿವೆ ಎಂದು ಅಭಿಪ್ರಾಯ ಪಟ್ಟರು.
ಇಂದಿನ ಫಾಸ್ಟ್ ಫ್ಯಾಶನ್ ಯುಗದಲ್ಲಿ ಬಟ್ಟೆಬರೆಗಳು ಅಲ್ಪ ಸಮಯ ಮಾತ್ರ ಬಾಳುತ್ತವೆ. ಆದರೆ ಚರಕದಂತಹ ಬಟ್ಟೆಗಳು ಸ್ಲೋ ಫ್ಯಾಶನ್ ಆದರೂ ಅದರ ಬಾಳಿಕೆ ಮಾತ್ರ ಧೀರ್ಘ ಅವಧಿಯದ್ದಾಗಿರುತ್ತದೆ. ಆದುದರಿಂದ ನಾವು ಇಂತಹ ಫ್ಯಾಶನ್ ಕಡೆ ಹೋಗಬೇಕು. ಆ ಮೂಲಕ ಈ ಸಂಸ್ಥೆಯನ್ನು ಬೆಂಬಲಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ಮಾತನಾಡಿ, ನಮ್ಮಲ್ಲಿ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಉತ್ಪನ್ನಗಳನ್ನು ತಯಾರಿಸ ಲಾಗುತ್ತಿದೆ. ಎಲ್ಲೂ ಯಂತ್ರಗಳನ್ನು ಬಳಸುವುದಿಲ್ಲ. ಆದುದರಿಂದ ಈಗಿನ ಯುವಜನತೆ ಈ ರೀತಿ ಚರಕದ ಕೈಮಗ್ಗದ ಕೆಲಸ ಮಾಡಲು ಬರುತ್ತಿಲ್ಲ ಎಂದು ಹೇಳಿದರು.
ಇದರಲ್ಲಿ ಬಹಳಷ್ಟು ಸೂಕ್ಷ್ಮ ಕೆಲಸಗಳಿರುವುದರಿಂದ ನುರಿತ ಕೆಲಸಗಾರರ ಕೊರತೆಯನ್ನು ಎದುರಿಸುತ್ತಿದ್ದೇವೆ. ಇದರಿಂದ ಗುಣಮಟ್ಟದ ಉತ್ಪನ್ನ ತಯಾರಿಸುವುದು ನಮಗೆ ದೊಡ್ಡ ಸವಾಲು ಆಗಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಸಮಾಜ ನಮಗೆ ಸಹಕಾರ ನೀಡಬೇಕು. ನಮ್ಮ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮನ್ನು ಬೆಂಬಲಿಸಬೇಕೆಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಉಪಸ್ಥಿತರಿದ್ದರು. ಚರಕ ಸಂಸ್ಥೆಯ ಪದ್ಮಶ್ರೀ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು!
ಮೇಳದಲ್ಲಿ ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧ ಉಡುಪುಗಳು, ಗುಳೇದಗುಡ್ಡದ ನೇಕಾರರ ಉತ್ಪನ್ನಗಳು, ಮರಳಿ ಮಣ್ಣಿಗೆಭಿಯ ಮಣ್ಣಿನ ಮಡಿಕೆ-ಕುಡಿಕೆಗಳು, ಶಿರಸಿಯ ಸಾವಯವ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ಮಂಗಳೂರು ಹೆಲ್ತಿ ಫೀಸ್ಟ್‌ನ ವಿಶೇಷ ಆಹಾರ ಉತ್ಪನ್ನಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು, ಕುಂದಾಪುರದ ಸಖಿ ಸೀರೆಗಳು ಇಲ್ಲಿ ಲಭ್ಯ ಇವೆ.
ನೈಸರ್ಗಿಕ ಬಣ್ಣದ ಬೆಡ್‌ಸ್ಪ್ರೆಡ್‌ಗಲು ಈ ಬಾರಿ ವಿಶೇಷವಾಗಿದೆ. ಜಮ್ದಾನಿ ಬಟ್ಟೆಯಿಂದ ತಯಾರಿಸಿದ ಸೀರೆ, ಖುರ್ತಾ, ಶರ್ಟ್ ಹಾಗೂ ಗೃಹಾ ಲಂಕಾರದ ಉಡುಪು ಸಿಗಲಿವೆ. ಉತ್ತರಕರ್ನಾಟಕದ ಭಾಗದ ಅಪ್ಟಟ ಕೈಮಗ್ಗದ ಸೀರೆಗಳು ಇಲ್ಲಿವೆ. ಈ ಮೇಳವು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ.







